×
Ad

ಹೆಚ್ಚುತ್ತಿರುವ ಗೃಹ, ವಾಹನ, ವೈಯಕ್ತಿಕ ಸಾಲಗಳಿಂದಾಗಿ ಕೌಟುಂಬಿಕ ಉಳಿತಾಯದಲ್ಲಿ ಕುಸಿತ: ಸರಕಾರದ ವರದಿ

Update: 2024-05-09 21:47 IST

Photo : moneycontrol

ಹೊಸದಿಲ್ಲಿ : ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ನಿರಂತರವಾಗಿ ಏರಿಕೆಯಾಗುತ್ತಿರುವ ಪರಿಣಾಮ ಕೌಟುಂಬಿಕ ಉಳಿತಾಯಗಳು ವಿತ್ತವರ್ಷ 2024ರಲ್ಲಿ ಸತತ ಮೂರನೇ ವರ್ಷವೂ ಕುಸಿದಿವೆ ಎಂದು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಬಿಡುಗಡೆಗೊಳಿಸಿರುವ 2024ರ ರಾಷ್ಟ್ರೀಯ ಲೆಕ್ಕಪತ್ರ ಸಾಂಖ್ಯಿಕ ವರದಿಯಲ್ಲಿನ ದತ್ತಾಂಶಗಳು ತೋರಿಸಿವೆ. ಆದರೆ ವೈಯಕ್ತಿಕ ಸಾಲಗಳ ಮೇಲೆ RBI ನಿರ್ಬಂಧಗಳಿಂದಾಗಿ 2024-25ರಲ್ಲಿ ಪರಿಸ್ಥಿತಿ ಬದಲಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಿಸಿದ್ದಾರೆ.

ಸಚಿವಾಲಯದ ದತ್ತಾಂಶಗಳಂತೆ 2022-23ರವರೆಗಿನ ಮೂರು ವರ್ಷಗಳಲ್ಲಿ ನಿವ್ವಳ ಕೌಟುಂಬಿಕ ಉಳಿತಾಯ ಒಂಭತ್ತು ಲಕ್ಷ ಕೋಟಿ ರೂ.ಗಳ ತೀವ್ರ ಕುಸಿತವನ್ನು ಕಂಡು 14.16 ಲಕ್ಷ ಕೋಟಿ ರೂ.ಗಳಿಗೆ ಇಳಿದಿದೆ.

ದತ್ತಾಂಶಗಳನ್ನು ವಿವರಿಸಿದ ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 2022-23ರ ಅವಧಿಯಲ್ಲಿ ಹೊಣೆಗಾರಿಕೆಗಳಲ್ಲಿ ಶೇ.73ರಷ್ಟು ತೀವ್ರ ಏರಿಕೆಯಾಗಿರುವುದು ಕೌಟುಂಬಿಕ ಉಳಿತಾಯದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಸುಳಿವುಗಳ ಪ್ರಕಾರ 2023-24ರಲ್ಲಿಯೂ ಉಳಿತಾಯ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಇದಕ್ಕೆ ಸಂಬಂಧಿಸಿದ ದತ್ತಾಂಶಗಳು ನಂತರ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಆದರೆ RBI ಅಸುರಕ್ಷಿತ ಸಾಲಗಳಿಗೆ ಕಡಿವಾಣ ಹಾಕಲು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ 2024-25ರಲ್ಲಿ ಈ ಪ್ರವೃತ್ತಿ ಬದಲಾಗಬಹುದು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಾಯರ್ ತಿಳಿಸಿದರು.

ಉಳಿತಾಯದ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಲಾಗುತ್ತಿದ್ದು, ಹೂಡಿಕೆ ವಿಧಾನದಲ್ಲಿ ಬದಲಾವಣೆ ಉಳಿತಾಯ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರಂ ಅವರು, ವಿತ್ತವರ್ಷ 2023ರಲ್ಲಿ ನಿವ್ವಳ ಕೌಟುಂಬಿಕ ಉಳಿತಾಯವು ಕಡಿಮೆಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಕಳವಳಗಳು ವ್ಯಕ್ತವಾಗಿವೆ. ಆದರೆ ವಾಸ್ತವದಲ್ಲಿ ಹೂಡಿಕೆ ವಿಧಾನದಲ್ಲಿ ಬದಲಾವಣೆಯಾಗಿದ್ದು, ಉಳಿತಾಯದ ಹಣವನ್ನು ರಿಯಲ್ ಎಸ್ಟೇಟ್ ಗಳಲ್ಲಿ ತೊಡಗಿಸಲಾಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News