ದಿಲ್ಲಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ: ಕೊರೆಯುವ ಚಳಿಯಲ್ಲಿ ನಿರಾಶ್ರಿತರಾದ ಜನರು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಿಲ್ಲಿಯಲ್ಲಿ ಕಳೆದ ಕೆಲವು ವಾರಗಳಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇದರಿಂದಾಗಿ ದಿಲ್ಲಿಯ ಹಲವಾರು ನಿವಾಸಿಗಳು ತಮ್ಮ ಕಟ್ಟಡದ ಅವಶೇಷಗಳ ಬಳಿ ಬೆಂಕಿ ಕಾಯಿಸಿಕೊಂಡು ಕೊರೆಯುವ ಚಳಿಗಾಲವನ್ನು ದೂಡುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ಇದಕ್ಕೂ ಮುನ್ನ, ಡಿಸೆಂಬರ್ 21ರಂದು ದಿಲ್ಲಿ ಮಹಾನಗರ ಪಾಲಿಕೆ(ಎಂಸಿಡಿ)ಯು ನಿಝಾಮುದ್ದೀನ್ ನ ಡಿಪಿಎಸ್ ಮೃಥುರಾ ಬಳಿ ಸುಮಾರು 300 ಮನೆಗಳನ್ನು ನೆಲಸಮಗೊಳಿಸಿತ್ತು. ತನ್ನ ಮನೆಯ ಅವಶೇಷಗಳಡಿ ಇದ್ದ ಹಾಸಿಗೆಯತ್ತ ಬೊಟ್ಟು ಮಾಡಿದ 39 ವರ್ಷದ ಲಲಿತಾ ದೇವಿ ತನ್ನ ಮನೆಯ ನೆಲಸಮಕ್ಕೆ ಸಾಕ್ಷಿಯಾದ ಬಗ್ಗೆ ನೋವು ಮತ್ತು ಆಘಾತವನ್ನು ವ್ಯಕ್ತಪಡಿಸಿದರು.
“ನಾನು ಈಗಷ್ಟೇ ನನ್ನ ಪೋಷಕರ ಮನೆಯಿಂದ ಹಿಂದಿರುಗಿದ್ದೆ ಹಾಗೂ ನನ್ನ ಮನೆಯನ್ನು ನೆಲಸಮಗೊಳಿಸಲು ಬುಲ್ಡೋಝರ್ ಗಳು ನೆರೆದಿರುವುದನ್ನು ಕಂಡೆ. ಸಮಸ್ಯೆಯನ್ನು ಬಗೆಹರಿಸಲು ನಾನು ಪ್ರಯತ್ನಿಸಿದರೂ ನನ್ನ ಮನೆ ಅವಶೇಷವಾಗಿ ಬದಲಾಯಿತು” ಎಂದು ನೋವು ತೋಡಿಕೊಂಡರು.
ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು 50 ಕಾರ್ಮಿಕರು, ಎಂಟು ಟ್ರಕ್ ಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ದಿಲ್ಲಿ ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ. 2006ಕ್ಕೂ ಮುನ್ನ ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳಿರಲಿಲ್ಲ ಎಂಬ ಉಪಗ್ರಹ ಚಿತ್ರವನ್ನು ಆಧರಿಸಿ, ಈ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.