ರಾಜಸ್ಥಾನದ ಸೋದರರಿಬ್ಬರು ಸ್ಮಾರ್ಟ್ ಸಿಟಿ ಹೆಸರಿನಲ್ಲಿ 70,000 ಜನರಿಗೆ 2,676 ಕೋಟಿ ರೂ.ಗಳನ್ನು ವಂಚಿಸಿದ್ದು ಹೇಗೆ?
PC : NDTV
ಜೈಪುರ: ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸುಮಾರು 70,000 ಜನರಿಗೆ 2,676 ಕೋಟಿ ರೂ.ಗಳ ಪಂಗನಾಮ ಹಾಕಿದ್ದ ರಾಜಸ್ಥಾನದ ಸುಭಾಷ್ ಬಿಜರಾನಿ ಮತ್ತು ಆತನ ಸೋದರ ರಣವೀರ್ ಬಿಜರಾನಿ ಈಗ ಜೈಲಿನಲ್ಲಿದ್ದಾರೆ. ಅಷ್ಟಕ್ಕೂ ಈ ಖತರ್ನಾಕ್ ಸೋದರರು ಜನರಿಗೆ ಟೋಪಿ ಹಾಕಿದ್ದೇ ಒಂದು ರೋಚಕ ಕಥೆ.
ಸಿಕಾರ್ ಜಿಲ್ಲೆಯ ನಿವಾಸಿಗಳಾದ ಬಿಜರಾನಿ ಸೋದರರು ʼನೆಕ್ಸಾ ಎವರ್‌ಗ್ರೀನ್ʼ ಹೆಸರಿನಲ್ಲಿ ಕಂಪನಿಯೊಂದನ್ನು ಹುಟ್ಟುಹಾಕಿ, ಗುಜರಾತಿನ ‘ಧೊಲೇರಾ ಸ್ಮಾರ್ಟ್ ಸಿಟಿ’ಯಲ್ಲಿ ಹೂಡಿಕೆಗೆ ಹೆಚ್ಚಿನ ಪ್ರತಿಫಲ ಮತ್ತು ನಿವೇಶನಗಳನ್ನು ನೀಡುವ ಆಮಿಷವನ್ನೊಡ್ಡಿ ಜನರನ್ನು ವಂಚಿಸಿದ್ದರು. ಧೊಲೇರಾ ಸ್ಮಾರ್ಟ್‌ಸಿಟಿ ಯೋಜನೆಗಳ ಚಿತ್ರಗಳನ್ನು ತೋರಿಸಿ ಜನರನ್ನು ಮರುಳು ಮಾಡಿದ್ದರು.
ತಮ್ಮ ಗುಂಪಿಗೆ ಹೆಚ್ಚಿನ ಹೂಡಿಕೆದಾರರನ್ನು ಸೇರಿಸಿದರೆ ಕಮಿಷನ್ ಮತ್ತು ನಿಗದಿತ ಗುರಿಯನ್ನು ಸಾಧಿಸಿದರೆ ಲ್ಯಾಪ್‌ಟಾಪ್,ಬೈಕ್ ಮತ್ತು ಕಾರುಗಳಂತಹ ಬಹುಮಾನಗಳನ್ನು ನೀಡುವುದಾಗಿಯೂ ಅವರು ಜನರನ್ನು ನಂಬಿಸಿದ್ದರು.
ರಣವೀರ್ ಬಿಜರಾನಿ ಮೊದಲು 2014ರಲ್ಲಿ ಧೊಲೇರಾದಲ್ಲಿ ಜಮೀನು ಖರೀದಿಸಿದ್ದ. ಬಳಿಕ ಆತನ ಸೋದರ ಸುಭಾಷ್ ಬಿಜರಾನಿ ಕೂಡ ಸೇನೆಯಿಂದ ತಾನು ನಿವೃತ್ತಗೊಂಡ ಬಳಿಕ ಸಿಕ್ಕಿದ್ದ 30 ಲಕ್ಷ ರೂ.ಗಳಿಂದ ಜಮೀನು ಖರೀದಿಸಿದ್ದ. ಬಳಿಕ ಇಬ್ಬರೂ ಸೇರಿ 2021ರಲ್ಲಿ ನೆಕ್ಸಾ ಎವರ್‌ಗ್ರೀನ್ ಕಂಪನಿಯನ್ನು ಸ್ಥಾಪಿಸಿ ಅದನ್ನು ಅಹ್ಮದಾಬಾದ್‌ನಲ್ಲಿ ನೋಂದಣಿ ಮಾಡಿಸಿದ್ದರು.
ತನ್ನನ್ನು ‘ಧೊಲೇರಾ ಸ್ಮಾರ್ಟ್ ಸಿಟಿ’ಯ ಭಾಗವೆಂದು ಹೇಳಿಕೊಂಡಿದ್ದ ಕಂಪನಿಯು ತನ್ನ ಬಳಿ 1,300 ಬಿಘಾ ಜಮೀನಿದ್ದು,ಅದನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವುದಾಗಿ ಹೇಳಿಕೊಂಡಿತ್ತು.
ದೇಶಾದ್ಯಂತ 70,000ಕ್ಕೂ ಅಧಿಕ ಜನರಿಗೆ ಫ್ಲ್ಯಾಟ್‌ಗಳು, ನಿವೇಶನಗಳು ಮತ್ತು ಭಾರೀ ಪ್ರತಿಫಲದ ಹೂಡಿಕೆ ಯೋಜನೆಗಳ ಆಮಿಷವನ್ನೊಡ್ಡಿ ಅವರಿಂದ ಸುಮಾರು 2,676 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು.
ಕಂಪನಿಗೆ ಕೆಲವು ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದ ಬಿಜರಾನಿ ಸೋದರರು ಅವರ ಮೂಲಕ ರಾಜಸ್ಥಾನದಲ್ಲಿ ಸಾವಿರಾರು ಏಜೆಂಟ್‌ರನ್ನು ನಿಯೋಜಿಸಿದ್ದರು. ಸುಮಾರು 1,500 ಕೋಟಿ ರೂ.ಗಳನ್ನು ಕಮಿಷನ್ ರೂಪದಲ್ಲಿ ವಿತರಿಸಲಾಗಿತ್ತು.
ಬಳಿಕ ವಂಚನೆಯ ಹಣದಿಂದ 1,300 ಬಿಘಾ ಜಮೀನು ಖರೀದಿಸಿದ್ದರು.
ನಂತರ ಅವರು ಐಷಾರಾಮಿ ಕಾರುಗಳು,ರಾಜಸ್ಥಾನದಲ್ಲಿ ಗಣಿಗಳು ಮತ್ತು ಹೋಟೆಲ್‌ಗಳು,ಅಹ್ಮದಾಬಾದ್‌ನಲ್ಲಿ ಫ್ಲ್ಯಾಟ್‌ಗಳು ಮತ್ತು ಗೋವಾದಲ್ಲಿ 25 ರೆಸಾರ್ಟ್‌ಗಳನ್ನು ಖರೀದಿಸಿದ್ದರು. 250 ಕೋಟಿ ರೂ.ನಗದನ್ನು ಉಳಿಸಿಕೊಂಡು ಉಳಿದ ಹಣವನ್ನು 27 ಶೆಲ್ ಕಂಪನಿಗಳಿಗೆ ವರ್ಗಾಯಿಸಿದ್ದರು. ವಂಚನೆ ಬೆಳಕಿಗೆ ಬರುತ್ತಿದ್ದಂತೆ ತಮ್ಮ ಎಲ್ಲ ಕಚೇರಿಗಳನ್ನು ಮುಚ್ಚಿ ಪರಾರಿಯಾಗಿದ್ದರು.
ರಾಜಸ್ಥಾನದ ಜೋಧಪುರ ಪೋಲಿಸರು ವಂಚನೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನೆಕ್ಸಾ ಎವರ್‌ಗ್ರೀನ್ ವಂಚನೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಈ.ಡಿ.)ವು ಗುರುವಾರ ಜೈಪುರ,ಸಿಕಾರ್,ಝುನ್‌ಝುನು ಮತ್ತು ಅಹ್ಮದಾಬಾದ್‌ನ 25 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ನಿಜವಾದ ಧೊಲೇರಾ ಸ್ಮಾರ್ಟ್ ಸಿಟಿ ಯೋಜನೆ:
ಧೊಲೇರಾ ಸ್ಮಾರ್ಟ್ ಸಿಟಿ ಕೇಂದ್ರ ಮತ್ತು ಗುಜರಾತ್ ಸರಕಾರಗಳ ಜಂಟಿ ಯೋಜನೆಯಾಗಿದೆ. ಇದು ಭಾರತದ ಮೊದಲ ಹಸಿರು ಸ್ಮಾರ್ಟ್ ಸಿಟಿಯಾಗಿದ್ದು,ದಿಲ್ಲಿಯ ಎರಡು ಪಟ್ಟು (920 ಚ.ಕಿ.ಮೀ.)ವಿಸ್ತೀರ್ಣವನ್ನು ಹೊಂದಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳು ಅಲ್ಲಿ ನಿರ್ಮಾಣಗೊಳ್ಳುತ್ತಿವೆ. ಅದು 2042ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕೃಪೆ: NDTV