ಯುದ್ಧೋನ್ಮಾದದ ನಡುವೆ ಸುಳ್ಳು ಸುದ್ದಿಗಳನ್ನು ಹೆಚ್ಚಿಸಿದ್ದ ಭಾರತೀಯ ಮಾಧ್ಯಮಗಳು: ʼನ್ಯೂಯಾರ್ಕ್ ಟೈಮ್ಸ್ʼ ವರದಿ
ಸಾಂದರ್ಭಿಕ ಚಿತ್ರ (credit: freepik.com)
ಹೊಸದಿಲ್ಲ: ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಸುದ್ದಿ ವರದಿಗಳು ಭಾರತದ ಅಗಾಧ ಯಶಸ್ಸಿನ ವರದಿ ಮಾಡಿದ್ದರು; ಭಾರತವು ಪಾಕಿಸ್ತಾನದ ಪರಮಾಣು ನೆಲೆಯ ಮೇಲೆ ದಾಳಿ ಮಾಡಿದೆ, ಎರಡು ಪಾಕಿಸ್ತಾನಿ ಯುದ್ಧವಿಮಾನಗಳನ್ನು ಹೊಡೆದುರುಳಿಸಿದೆ, ದೇಶದ ತೈಲ ಮತ್ತು ವ್ಯಾಪಾರ ಜೀವನಾಡಿಯಾದ ಕರಾಚಿ ಬಂದರನ್ನು ಭಾಗಶಃ ಸ್ಫೋಟಿಸಿದೆ ಇತ್ಯಾದಿ, ಇತ್ಯಾದಿ ಪ್ರತಿಯೊಂದೂ ಮಾಹಿತಿಯು ಅತ್ಯಂತ ನಿರ್ದಿಷ್ಟವಾಗಿತ್ತು, ಆದರೆ ಅದರಲ್ಲಿ ಯಾವುದೂ ನಿಜವಾಗಿರಲಿಲ್ಲ ಎಂದು ʼನ್ಯೂಯಾರ್ಕ್ ಟೈಮ್ಸ್ʼ ವರದಿ ಮಾಡಿದೆ.
ಉಭಯ ದೇಶಗಳ ನಡುವಿನ ತೀವ್ರ ಮಿಲಿಟರಿ ಸಂಘರ್ಷ ಆರಂಭಗೊಂಡಾಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳು ವ್ಯಾಪಕವಾಗಿ ಹರಿದಾಡಿವೆ. ಭಾರೀ ಪ್ರಮಾಣದ ಸುಳ್ಳುಗಳು, ಅರ್ಧಸತ್ಯಗಳು, ಮೀಮ್‌ಗಳು, ದಾರಿ ತಪ್ಪಿಸುವ ವೀಡಿಯೊ ತುಣುಕುಗಳು ಮತ್ತು ಕೃತಕ ಬುದ್ಧಿಮತ್ತೆ(ಎಐ)ಯ ನೆರವಿನಿಂದ ತಿರುಚಲ್ಪಟ್ಟ ಭಾಷಣಗಳಿಂದಾಗಿ ಗಡಿಯ ಎರಡೂ ಕಡೆಗಳಲ್ಲಿ ಕಟ್ಟುಕಥೆಗಳಿಂದ ಸತ್ಯವನ್ನು ಪ್ರತ್ಯೇಕಿಸುವುದು ಅಸಾಧ್ಯವಾಗಿದೆ. ಆದರೆ ಈ ಸುಳ್ಳುಗಳ ಮಹಾಪೂರದ ಒಂದು ಭಾಗವು ಮುಖ್ಯವಾಹಿನಿಯ ಮಾಧ್ಯಮಗಳಿಗೂ ತಲುಪಿದ್ದು, ಇದು ಒಂದು ಕಾಲದಲ್ಲಿ ತಮ್ಮ ಸ್ವತಂತ್ರ ಪತ್ರಿಕೋದ್ಯಮದಿಂದಾಗಿ ವಿಶ್ವಾಸಪಾತ್ರವಾಗಿದ್ದ ಭಾರತದಲ್ಲಿಯ ಮಾಧ್ಯಮ ಸಂಸ್ಥೆಗಳ ವಿಕಸನದ ಮೇಲೆ ನಿಗಾಯಿರಿಸಿದ್ದ ವಿಶ್ಲೇಷಕರಲ್ಲಿ ಆತಂಕವನ್ನು ಮೂಡಿಸಿತ್ತು. ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ ಟಿವಿ ನಿರೂಪಕರು ಮತ್ತು ವ್ಯಾಖ್ಯಾನಕಾರರು ಎರಡು ಅಣ್ವಸ್ತ್ರ ಸಜ್ಜಿತ ದೇಶಗಳ ನಡುವಿನ ಯುದ್ಧಕ್ಕೆ ʼಚಿಯರ್‌ಲೀಡರ್ʼಗಳಾಗುವುದರೊಂದಿಗೆ ಬ್ರೇಕಿಂಗ್ ನ್ಯೂಸ್‌ಗಳು ಮತ್ತು ಅಬ್ಬರದ ದೇಶಭಕ್ತಿಯೊಂದಿಗೆ ವರದಿಗಾರಿಕೆಗಾಗಿ ಪೈಪೋಟಿಯು ಉತ್ತುಂಗಕ್ಕೇರಿತ್ತು. ಕೆಲವು ಪ್ರಸಿದ್ಧ ಟಿವಿ ನೆಟ್‌ವರ್ಕ್‌ಗಳು ರಾಷ್ಟ್ರವಾದದ ಉತ್ಸಾಹದ ನಡುವೆ ಪರಿಶೀಲಿಸಲ್ಪಡದ ಮಾಹಿತಿಗಳು ಅಥವಾ ಕಟ್ಟುಕಥೆಗಳನ್ನು ಪ್ರಸಾರ ಮಾಡಿದ್ದವು ಎಂದು ʼನ್ಯೂಯಾರ್ಕ್ ಟೈಮ್ಸ್ʼ ವರದಿ ಮಾಡಿದೆ.
ಪಾಕಿಸ್ತಾನದ ಪರಮಾಣು ನೆಲೆಯ ಮೇಲೆ ಭಾರತದ ದಾಳಿ ನಡೆದಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದ್ದವು ಮತ್ತು ದಾಳಿಯಿಂದಾಗಿ ವಿಕಿರಣ ಸೋರಿಕೆಯಾಗಿದೆ ವದಂತಿಗಳು ಹುಟ್ಟಿಕೊಂಡಿದ್ದವು. ದಾಳಿಗಳು ಎಲ್ಲಿ ನಡೆದಿವೆ ಎನ್ನುವುದನ್ನು ತೋರಿಸಲು ವಿವರವಾದ ನಕ್ಷೆಗಳನ್ನು ಅವು ಹಂಚಿಕೊಂಡಿದ್ದವು. ತಮ್ಮ ಈ ಹೇಳಿಕೆಗಳನ್ನು ಎತ್ತಿ ಹಿಡಿಯಲು ಅವುಗಳ ಬಳಿ ಯಾವುದೇ ಪುರಾವೆಯಿರಲಿಲ್ಲ. ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆಯು ದಾಳಿ ನಡೆಸಿದೆ ಎಂಬ ಸುಳ್ಳುಸುದ್ದಿಯೂ ವ್ಯಾಪಕವಾಗಿ ಪ್ರಸಾರಗೊಂಡಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.
2019ರಲ್ಲಿ ಪಾಕ್ ಜೊತೆ ಭಾರತದ ಸಂಘರ್ಷದ ಸಂದರ್ಭದಲ್ಲಿಯೂ ಸಾಮಾಜಿಕ ಮಾಧ್ಯಮಗಳು ತಪ್ಪು ಮಾಹಿತಿಗಳಿಂದ ತುಂಬಿದ್ದವು, ಆದರೆ ಈ ಸಲ ಗಮನಾರ್ಹ ವಿಷಯವೆಂದರೆ ಹಿಂದೆ ವಿಶ್ವಾಸಾರ್ಹರು ಎಂದು ಹೆಸರು ಪಡೆದಿದ್ದ ಪತ್ರಕರ್ತರು ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳೂ ನೇರವಾಗಿ ಕಟ್ಟುಕಥೆಗಳನ್ನು ಪ್ರಕಟಿಸಿದ್ದವು ಎಂದು ಅಮೆರಿಕನ್ ವಿವಿಯಲ್ಲಿ ರಾಜಕೀಯ ವಿಜ್ಞಾನದ ಸಹಾಯಕ ಪ್ರೊಫೆಸರ್ ಸುಮಿತ್ರಾ ಬದರೀನಾಥನ್ ಅವರನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸಶಸ್ತ್ರ ಸಂಘರ್ಷ ನಡೆಯುತ್ತಿರುವವರೆಗೂ ಕಾದಾಡುವ ದೇಶಗಳು ಸುಳ್ಳುಗಳು ಮತ್ತು ತಪ್ಪು ಮಾಹಿತಿಗಳನ್ನು ಹರಡುತ್ತಲೇ ಬಂದಿವೆ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಇದಕ್ಕೆ ಹೊರತಾಗಿಲ್ಲ. ಅವು ತಮ್ಮ ದೇಶಕ್ಕೆ ಅನುಕೂಲಕರವಾದ ಸುದ್ದಿಗಳನ್ನೇ ಪ್ರಕಟಿಸುತ್ತವೆ ಮತ್ತು ನಂತರ ತಪ್ಪು ಎಂದು ಸಾಬೀತಾಗುವ ಮಾಹಿತಿಗಳನ್ನು ಪ್ರಕಟಿಸುತ್ತಿರುತ್ತವೆ.
2014ರಲ್ಲಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ವಾಕ್ ಸ್ವಾತಂತ್ರ್ಯಕ್ಕೆ ನಿರಂತರವಾಗಿ ಧಕ್ಕೆಯುಂಟಾಗುತ್ತಿದೆ. ಸರಕಾರದ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡುವ ಸುದ್ದಿಗಳನ್ನು ಪ್ರಕಟಿಸದಂತೆ ಹಲವು ಮಾಧ್ಯಮ ಸಂಸ್ಥೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕೆಲವು ಪ್ರಮುಖ ಟಿವಿ ನೆಟ್‌ವರ್ಕಗಳು ಸೇರಿದಂತೆ ಇತರ ಮಾಧ್ಯಮಗಳು ಸರಕಾರದ ನೀತಿಗಳ ಪ್ರಚಾರಕರಾಗಿಬಿಟ್ಟಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ಎತ್ತಿ ತೋರಿಸಿದೆ.
ಭಾರತದ ಪ್ರಮುಖ ಪತ್ರಕರ್ತರಲ್ಲೋರ್ವರಾಗಿರುವ ಇಂಡಿಯಾ ಟುಡೇ ಟವಿ ವಾಹಿನಿಯ ನಿರೂಪಕ ರಾಜದೀಪ್ ಸರ್ದೇಸಾಯಿ ಅವರು ಪಾಕಿಸ್ತಾನದ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ತಪ್ಪು ವರದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಕಳೆದ ವಾರ ವೀಕ್ಷಕರ ಕ್ಷಮೆ ಯಾಚಿಸಿದ್ದಾರೆ.
ಆಜ್‌ತಕ್ ಮತ್ತು ನ್ಯೂಸ್ 18 ಸೇರಿದಂತೆ ಪ್ರಮುಖ ಟಿವಿ ವಾಹಿನಿಗಳು ಪ್ರಸಾರ ಮಾಡಿದ್ದ ಹಲವಾರು ಕಟ್ಟುಕಥೆಗಳ ಪುರಾವೆಗಳನ್ನು ಭಾರತದ ಸ್ವತಂತ್ರ ಸತ್ಯಪರಿಶೀಲನೆ ಜಾಲತಾಣ ʼಆಲ್ಟ್‌ನ್ಯೂಸ್ʼ ಒದಗಿಸಿದೆ.