×
Ad

ಡಿಜಿಪಿನ್ ಪಡೆಯುವುದು ಹೇಗೆ?

Update: 2025-06-21 21:57 IST

ಹೊಸದಿಲ್ಲಿ: ಭಾರತ ಸರ್ಕಾರ ಡಿಜಿಪಿನ್ ಎಂಬ ಹೊಸ ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ದೇಶಾದ್ಯಂತ ಸ್ಥಳಗಳ ನಿಖರವಾದ ಗುರುತಿಸುವಿಕೆ ಇದು ನೆರವಾಗಲಿದೆ.

ಡಿಜಿಪಿನ್ ಒಂದು ವಿಶಿಷ್ಟವಾದ 10 ಕ್ಯಾರೆಕ್ಟರ್ಗಳ ಸಂಕೇತ. ಇದನ್ನು ಭಾರತದಲ್ಲಿ ಸರಿಸುಮಾರು 4x4 ಚದರ ಮೀಟರ್‌ಗಳಷ್ಟು ವಿಸ್ತೀರ್ಣದ ಯಾವುದೇ ಸ್ಥಳಕ್ಕೂ ರಚಿಸಬಹುದು. ಅಂದರೆ, ಯಾವುದೇ ಮನೆ, ಕಚೇರಿಯ ಕಟ್ಟಡಗಳು ಸೇರಿದಂತೆ, ನಗರ ಮತ್ತು ಗ್ರಾಮಾಂತರ ಪ್ರದೇಶದ ಬಹುತೇಕ ಎಲ್ಲಾ ರೀತಿಯ ಆಸ್ತಿಗಳಿಗೆ ಈ ಯೂನಿಕ್ ಆದ ಪಿನ್‌ ರಚಿಸಬಹುದು. ಪ್ರತಿಯೊಂದು ಡಿಜಿಪಿನ್ ಅನ್ನು ಆ ಆಸ್ತಿಯ ಭೌಗೋಳಿಕ ನಕ್ಷೆಯೊಂದಿಗೆ ಎನ್‌ಕೋಡ್ ಮಾಡಲಾಗಿದೆ.

Full View

ಇದು ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಡಿಜಿಪಿನ್‌ನ ತಂತ್ರಜ್ಞಾನವನ್ನು ಐಐಟಿ ಹೈದರಾಬಾದ್ ಮತ್ತು ಇಸ್ರೋ ಮತ್ತು ರಾಷ್ಟ್ರೀಯ ದೂರಸಂವೇದಿ ಕೇಂದ್ರದ (ಎನ್ಆರ್ಎಸ್ಸಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಆದರೆ, ಡಿಜಿಪಿನ್ ವಿಳಾಸ ಕಂಡುಕೊಳ್ಳಲು ಈಗಾಗಲೇ ಇರುವ ಸಾಂಪ್ರದಾಯಿಕ ಆರು ಅಂಕಿಗಳ ಪಿನ್ ಕೋಡ್ ವ್ಯವಸ್ಥೆಯನ್ನು ಬದಲಿಸುವುದಿಲ್ಲ.ಬದಲಾಗಿ, ಇದು ಅಸ್ತಿತ್ವದಲ್ಲಿರುವ ಅಂಚೆ ವಿಳಾಸಗಳನ್ನು ಹೆಚ್ಚು ನಿಖರವಾಗಿ ಮುಟ್ಟಲು ನೆರವಾಗಲಿದೆ.

ಹಾಗಾದರೆ, ಇದರ ಉದ್ದೇಶವೇನು?

ಇದು ಸ್ಥಳದ ಮ್ಯಾಪಿಂಗ್ ಅನ್ನು ಸರಳಗೊಳಿಸಿದ್ದು, ಗ್ರಾಹಕರಿಗೆ ತಲುಪಬೇಕಿರುವ ಯಾವುದೇ ಸರಕನ್ನು ಕೊನೆಯ ಹಂತದವರೆಗೂ ತ್ವರಿತವಾಗಿ ಮುಟ್ಟಿಸಲು ನೆರವಾಗುವ ಉದ್ದೇಶ ಹೊಂದಿದೆ. ಇಲ್ಲಿಯವರೆಗೆ ಇದ್ದ ಭೌಗೋಳಿಕ ನಿಖರತೆಯ ಮಟ್ಟದಲ್ಲಿನ ಕೊರತೆಯನ್ನು ಇದು ನಿವಾರಿಸಲಿದೆ ಎಂದು ಹೇಳಲಾಗಿದೆ.

ಇದು ಪೊಲೀಸ್, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಸೇವೆಗಳು ತುರ್ತಾಗಿ ನಿರ್ದಿಷ್ಟ ಸ್ತಳಕ್ಕೆ ಮುಟ್ಟುವಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ವಿಶೇಷವಾಗಿ ಗ್ರಾಮೀಣ ಮತ್ತು ಕಡಿಮೆ ಸೌಲಭ್ಯದ ಪ್ರದೇಶಗಳಲ್ಲಿ ನಿಗದಿತ ಸ್ಥಳ ತಲುಪಲು ಸಹಾಯ ಮಾಡಲಿದೆ. ರಾಷ್ಟ್ರೀಯ ಜಿಯೋಸ್ಪೇಷಿಯಲ್ ನೀತಿ 2022 ರ ಅಡಿಯಲ್ಲಿ ಅಧಿಕೃತವಾಗಿ ಪರಿಶೀಲಿಸಿದ ಮತ್ತು ಅಳವಡಿಸಿಕೊಂಡ ಡಿಜಿಪಿನ್ ವ್ಯವಸ್ಥೆ ಈಗ ಎಲ್ಲಾ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಸಂಸ್ಥೆಗಳು ಮತ್ತು ಬಳಕೆದಾರರಿಗೆ ಲಭ್ಯವಿದೆ.

ಹಾಗಾದರೆ ನೀವು ನಿಮ್ಮ ಡಿಜಿಪಿನ್ ಪಡೆಯುವುದು ಹೇಗೆ?

ಇದಕ್ಕಾಗಿಯೇ ಭಾರತೀಯ ಅಂಚೆ ಇಲಾಖೆಯ ಒಂದು ಪೋರ್ಟಲ್ ಇದೆ. ಅದರ ಹೆಸರು dac.indiapost.gov.in ಅದರಲ್ಲಿ Know Your DIGIPIN ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಈ ಪೋರ್ಟಲ್ ನೀವು ಎಲ್ಲಿದ್ದೀರಿ ಎಂದು ಕೇಳುತ್ತದೆ. ನಿಮ್ಮ ಸ್ಥಳವನ್ನು ಶೇರ್ ಮಾಡಲು ನೀವು ಬಯಸುತ್ತೀರಾ ಅಥವಾ ಇಲ್ಲವಾ ಎಂಬುದರ ಬಗ್ಗೆ ನಿಮ್ಮಿಂದ ಒಪ್ಪಿಗೆ ಪಡೆಯುತ್ತದೆ.

ನಿಮಗೆ ಇಲ್ಲಿ ಮೂರು ಆಯ್ಕೆಗಳಿವೆ. ಮೊದಲನೆಯದು, ಸೈಟ್‌ಗೆ ಭೇಟಿ ನೀಡುವಾಗ ಒಪ್ಪಿಗೆ ನೀಡಿ.ಎರಡನೆಯದು, ಈ ಬಾರಿ ಒಪ್ಪಿಗೆ ನೀಡಿ. ಮೂರನೆಯದು, ಎಂದಿಗೂ ಒಪ್ಪಿಗೆ ಇಲ್ಲ. ನಿಮ್ಮ ಡಿಜಿಪಿನ್ ಪಡೆಯಲು, ನೀವು ಈ ಬಾರಿ ಒಪ್ಪಿಗೆ ಅಂದ್ರೆ allow this time ಅನ್ನು ಆಯ್ಕೆ ಮಾಡಬೇಕು. ನಿಮ್ಮ ಸಿಸ್ಟಂನಲ್ಲಿ ಲೊಕೇಶನ್ ಆನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನಿಮ್ಮ ವೈಯಕ್ತಿಕ ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲ್ ಫೋನ್ ಯಾವುದರಲ್ಲಿ ಇದನ್ನು ಪ್ರಯತ್ನಿಸುತ್ತಿದ್ದೀರೊ ಅದರಲ್ಲಿ ಲೊಕೇಶನ್ ಆನ್ ಆಗಿರಬೇಕು. ಅಲ್ಲಿ ನೀವು ಸಮ್ಮತಿ ನೀಡಬೇಕು.

ಅದರಲ್ಲಿ ಒಪ್ಪಿಗೆ ಪುಟ ಕಾಣಿಸಿಕೊಳ್ಳುತ್ತದೆ. ನಿಖರವಾದ ಡಿಜಿಪಿನ್ ಒದಗಿಸುವುದಾಗಿಯೂ, ನಿಮ್ಮ ಸ್ಥಳದ ಗೌಪ್ಯತೆ ಕಾಯುವುದಾಗಿಯೂ, ನಿಮ್ಮ ಸ್ಥಳವನ್ನು ಅದರ ಡಿಜಿಪಿನ್‌ ಹುಡುಕಲು ಮಾತ್ರ ಬಳಸುವುದಾಗಿಯೂ ಅದರಲ್ಲಿ ಹೇಳಲಾಗಿರುತ್ತದೆ. ನೀವು ಸಮ್ಮತಿ ಕೊಟ್ಟ ಬಳಿಕ ಗೂಗಲ್ ಮ್ಯಾಪ್ ಮತ್ತು ಮೂಲೆಯಲ್ಲಿ ನಿಮ್ಮ ಡಿಜಿಪಿನ್ ಕಾಣಿಸುತ್ತದೆ.

ಈ ಡಿಜಿಪಿನ್ ಅನ್ನು ನೀವು ನಿಮ್ಮ ಎಲ್ಲಾ ಉದ್ದೇಶಗಳಿಗಾಗಿ ಬಳಸಬಹುದು. ಆನ್ಲೈನ್ ಶಾಪಿಂಗ್ ಮಾಡುವಾಗ ಡಿಜಿಪಿನ್ ಆಯ್ಕೆ ಬಳಸಬಹುದಾದಲ್ಲಿ ನಿಮ್ಮ ಡಿಜಿಪಿನ್ ಹಾಕಬಹುದು. ಪಿನ್ ಕೋಡ್ ಡ್ ಬದಲಾಗಿ ಡಿಜಿಪಿನ್ ವಿಳಾಸ ಕಾಣಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News