ದಿಲ್ಲಿ | ಪಾರ್ಕಿಂಗ್ ವಿಚಾರದಲ್ಲಿ ಜಗಳ : ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿಯ ಹತ್ಯೆ
ಆಸಿಫ್ ಖುರೇಷಿ / ಹುಮಾ ಖುರೇಷಿ (Photo: Instagram)
ಹೊಸದಿಲ್ಲಿ: ಆಗ್ನೇಯ ದಿಲ್ಲಿಯ ಭೋಗಲ್ ಪ್ರದೇಶದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದ ಜಗಳದಲ್ಲಿ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿಯನ್ನು ಇರಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಆಸಿಫ್ ಖುರೇಷಿ ತನ್ನ ಮನೆಯ ಮುಖ್ಯ ದ್ವಾರದ ಮುಂದೆ ದ್ವಿಚಕ್ರ ವಾಹನವನ್ನು ನಿಲ್ಲಿಸದಂತೆ ಓರ್ವ ವ್ಯಕ್ತಿಗೆ ಕೇಳಿಕೊಂಡಿದ್ದಾನೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಆಸಿಫ್‌ಗೆ ಹರಿತವಾದ ಆಯುಧದಿಂದು ದುಷ್ಕರ್ಮಿಗಳು ಇರಿದಿದ್ದಾರೆ.
ಇರಿತದಿಂದ ಆಸಿಫ್‌ನ ಎದೆಗೆ ಗಂಭೀರ ಗಾಯವಾಗಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಬಂಧಿತರನ್ನು ಉಜ್ವಲ್ (19) ಮತ್ತು ಗೌತಮ್ (18) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಆಸಿಫ್‌ನ ಮನೆಯಿಂದ ಕೆಲವೇ ಮೀಟರ್ ದೂರದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.