ಚಲಿಸುತ್ತಿದ್ದ ರೈಲಿನಲ್ಲಿ ಇರಿದು ಯೋಧನ ಹತ್ಯೆ; ತನಿಖೆಗೆ ಮಾನವ ಹಕ್ಕು ಆಯೋಗ ಆಗ್ರಹ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ನ. 7: ಚಲಿಸುತ್ತಿದ್ದ ರೈಲಿನಲ್ಲಿ ಭಾರತೀಯ ಸೇನೆಯ ಯೋಧರೋರ್ವರನ್ನು ಇರಿದು ಹತ್ಯೆಗೈದಿರುವ ಘಟನೆ ಕುರಿತು ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ಆಗ್ರಹಿಸಿದೆ.
ಆರೋಪಿ ರೈಲು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಸಂತ್ರಸ್ತ ಯೋಧನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಅದು ಒತ್ತಾಯಿಸಿದೆ.
ಚಲಿಸುತ್ತಿದ್ದ ಜಮ್ಮು ತಾವಿ-ಸಾಬರ್ಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಕಂಬಳಿ ಹಾಗೂ ಬೆಡ್ ಶೀಟ್ ಕುರಿತ ವಿವಾದದ ಹಿನ್ನೆಲೆಯಲ್ಲಿ ರೈಲು ಸಿಬ್ಬಂದಿ ಯೋಧ ಜಿಗರ್ ಚೌಧರಿಯನ್ನು ಇರಿದು ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ರಜೆಯ ಹಿನ್ನೆಲೆಯಲ್ಲಿ ಜಿಗರ್ ಚೌಧರಿ ಗುಜರಾತ್‌ನ ಸಬರ್ಮತಿಯಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದರು. ನವೆಂಬರ್ 2ರಂದು ರಾತ್ರಿ ಅವರು ಪಂಜಾಬ್‌ನ ಫಿರೋಝ್ ಪುರ ರೈಲು ನಿಲ್ದಾಣದಿಂದ ಜಮ್ಮು ತಾವಿ-ಸಬರ್ಮತಿ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕೋಚ್ ಹತ್ತಿದ್ದರು.
ಪ್ರಯಾಣದ ಸಂದರ್ಭ ಚೌಧರಿ ರೈಲು ಸಿಬ್ಬಂದಿಯಲ್ಲಿ ಕಂಬಳಿ ಹಾಗೂ ಬೆಡ್‌ಶೀಟ್ ಕೇಳಿದ್ದಾರೆ. ಆದರೆ ರೈಲು ಸಿಬ್ಬಂದಿ ನಿರಾಕರಿಸಿದ್ದಾನೆ. ಇದು ವಾಗ್ವಾದಕ್ಕೆ ಕಾರಣವಾಗಿದ್ದು, ಘರ್ಷಣೆಗೆ ತಿರುಗಿತು. ಈ ಸಂದರ್ಭ ರೈಲು ಸಿಬ್ಬಂದಿ ಚೂರಿಯಿಂದ ಚೌಧರಿ ಅವರ ಕಾಲಿಗೆ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವಕ್ಕೀಡಾದ ಚೌಧರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರೈಲು ಬಿಕೇನಾರ್‌ಗೆ ಆಗಮಿಸಿದ ಸಂದರ್ಭ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಅವರ ದೂರಿನ ಆಧಾರದಲ್ಲಿ ಆರೋಪಿ ರೈಲು ಸಿಬ್ಬಂದಿ ವಿರುದ್ಧ ಸರಕಾರ ರೈಲ್ವೆ ಪೊಲೀಸ್ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 103 (1)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
ಆರೋಪಿಯನ್ನು ಝುಬೈರ್ ಮೆಮನ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದೆ ಅಪರಾಧಕ್ಕೆ ಬಳಸಿದ ಚಾಕುವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೆಮನ್ ನನ್ನು ಗುತ್ತಿಗೆಗಾರರ ಮೂಲಕ ನೇಮಿಸಿಕೊಳ್ಳಲಾಗಿದೆ. ಘಟನೆಯ ಬಳಿಕ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಸರಕಾರೇತರ ಸಂಸ್ಥೆ ಸಹ್ಯಾದ್ರಿ ಹಕ್ಕುಗಳ ವೇದಿಕೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾಗಿರುವ ಎನ್‌ಎಚ್‌ಆರ್‌ಸಿ ರೈಲ್ವೇ ಮಂಡಳಿ ಅಧ್ಯಕ್ಷ ಹಾಗೂ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್)ಯ ಮಹಾ ನಿರ್ದೇಶಕರಿಗೆ ನೋಟಿಸು ಜಾರಿ ಮಾಡಿದೆ.