ಐ ಲವ್ ಮುಹಮ್ಮದ್ ಪೋಸ್ಟರ್ ವಿವಾದ : ಬರೇಲಿಯಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ
ಬರೇಲಿ ಪ್ರವೇಶಿಸದಂತೆ ಸಂಸದ ಚಂದ್ರಶೇಖರ ಆಝಾದ್‌ಗೆ ಪೊಲೀಸರಿಂದ ತಡೆ
Photo Credit : PTI
ಹೊಸದಿಲ್ಲಿ, ಆ.2: ‘ಐ ಲವ್ ಮೊಹಮ್ಮದ್’ ಪೋಸ್ಟರ್ ವಿವಾದ ಹಾಗೂ ದಸರಾ ಮತ್ತು ದುರ್ಗಾಪೂಜಾ ಉತ್ಸವಗಳ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಬರೇಲಿಯಲ್ಲಿ ಗುರುವಾರ ಮಧ್ಯಾಹ್ನ 3:00 ಗಂಟೆಯಿಂದ ಶನಿವಾರದವರೆಗೆ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಭಾರೀ ಜನಸಂದಣಿಯಿರುವ ರಾಮಲೀಲಾ ಹಾಗೂ ರಾವಣದಹನ ಪ್ರದರ್ಶನಗಳು ನಡೆಯುವ ಮೈದಾನಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ.
ಬರೇಲಿ ವಿಭಾಗದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ ಆದೇಶವನ್ನು ಜಿಲ್ಲಾಡಳಿತ ಪ್ರಕಟಿಸಿದೆ. ವದಂತಿಗಳನ್ನು ಹರಡಲು ಹಾಗೂ ಕೋಮು ಉದ್ವಿಗ್ನತೆಯನ್ನು ಕೆರಳಿಸಲು ಫೇಸ್‌ಬುಕ್, ಯೂಟ್ಯೂಬ್ ಹಾಗೂ ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಹೀಗಾಗಿ ಶಾಂತಿಯನ್ನು ಕಾಪಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಅದು ತಿಳಿಸಿದೆ.
ಇದರ ಜೊತೆಗೆ ಉದ್ವಿಗ್ನ ಪರಿಸ್ಥಿತಿ ಇರುವ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಸ್ಥಳೀಯ ಪೊಲೀಸರಲ್ಲದೆ ಪ್ರಾಂತೀಯ ಸಶಸ್ತ್ರ ಕಾನ್ಸ್‌ಟೇಬಲರಿ (ಪಿಎಸಿ) ಹಾಗೂ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್)ಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬರೇಲಿಯ ಆಸುಪಾಸಿನ ಪ್ರದೇಶ, ಶಹಜಹಾನ್‌ಪುರ, ಪಿಲಿಭಿಟ್ ಹಾಗೂ ಬುಡಾವುನ್ ಜಿಲ್ಲೆಗಳಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ.
ಕಳೆದ ವಾರ ಬರೇಲಿ ಪಟ್ಟಣದ ಕೋಟ್ವಾಲಿ ಪ್ರದೇಶದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಪೊಲೀಸರು ಹಾಗೂ ನಾಗರಿಕರ ನಡುವೆ ಘರ್ಷಣೆಯುಂಟಾಗಿತ್ತು. ‘ ಐ ಲವ್ ಮುಹಮ್ಮದ್’ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿ ಮುಸ್ಲಿಂ ಧರ್ಮಗುರು ತೌಕೀರ್‌ಖಾನ್ ಅವರು ಪ್ರತಿಭಟನೆಗೆ ಕರೆ ನೀಡಿದ್ದರು.
ಹಿಂಸಾಚಾರಕ್ಕೆ ಸಂಬಂಧಿಸಿ ಈವರೆಗೆ 81 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನೆಯ ಸಂದರ್ಭ ಹಿಂಸಾಚಾರದಲ್ಲಿ ಶಾಮೀಲಾದ ವ್ಯಕ್ತಿಗಳ ಆಸ್ತಿಪಾಸ್ತಿಗಳನ್ನು ನಾಶಪಡಿಸಲಾಗಿದೆ.
ಪೊಲೀಸರು ಈವರೆಗೆ 180 ಮಂದಿ ಹಾಗೂ 2,500 ಹೆಸರಿಸದ ವ್ಯಕ್ತಿಗಳ ವಿರುದ್ಧ ಒಟ್ಟು 10 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ಮಧ್ಯೆ ನಗರದ ಸಿಬಿ ಗಂಜ್‌ನಲ್ಲಿ ಎನ್‌ಕೌಂಟರ್ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರಿಗೆ ಗುಂಡೇಟಿನ ಗಾಯಗಳಾಗಿದ್ದು ಅವರಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬರೇಲಿ ಪ್ರವೇಶಿಸದಂತೆ ಸಂಸದ ಚಂದ್ರಶೇಖರ ಆಝಾದ್‌ಗೆ ಪೊಲೀಸರಿಂದ ತಡೆ
ಗಲಭೆ ಸಂತ್ರಸ್ತರನ್ನು ಭೇಟಿಯಾಗಲು ಹಿಂಸಾಚಾರ ಪೀಡಿತ ಬರೇಲಿಗೆ ಗುರುವಾರ ಪ್ರಯಾಣಿಸುತ್ತಿದ್ದ ಲೋಕಸಭಾ ಸಂಸದ ಚಂದ್ರಶೇಖರ ಆಝಾದ್ ಅವರನ್ನು ಶಹರಣ್‌ಪುರದಲ್ಲಿ ಸ್ಥಳೀಯ ಪೊಲೀಸರು ತಡೆದಿದ್ದಾರೆ.
ಆಝಾದ್ ಅವರು ಬುಧವಾರ ತಡರಾತ್ರಿ ಶಹರಣ್‌ಪುರ ಚುಟ್‌ಮಾಲ್‌ಪುರದಲ್ಲಿರುವ ದಲಿತ ಕಾಲನಿಯನ್ನು ತಲುಪಿದ್ದರು. ಆಗ ಅಲ್ಲಿಗೆ ಆಗಮಿಸಿದ ಪೊಲೀಸರು ಬರೇಲಿಗೆ ಪ್ರಯಾಣಿಸದಂತೆ ಆಝಾದ್ ಅವರಿಗೆ ಸೂಚಿಸಿದ್ದರು.
ಛುಟ್‌ನಾಲ್‌ಪುರದ ನಿವಾಸಿಯಾದ ಆಝಾದ್ ಅವರು ನಗೀನಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ತಾನು ಬರೇಲಿ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡುವ ಉದ್ದೇಶ ಹೊಂದಿರುವುದಾಗಿ ಆಝಾದ್ ತಿಳಿಸಿದ ಬಳಿಕ ಜಿಲ್ಲಾಡಳಿತವು ಕಟ್ಟೆಚ್ಟರವನ್ನು ವಹಿಸಿತ್ತು ಹಾಗೂ ಆಝಾದ್ ನಿವಾಸದ ಸುತ್ತಲೂ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ತಡೆಬೇಲಿಗಳನ್ನು ಅಳವಡಿಸಲಾಗಿದೆ.