×
Ad

ಪಹಲ್ಗಾಮ್ ದಾಳಿಯು ಭದ್ರತಾ ವೈಫಲ್ಯ, ಅದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ: ಜಮ್ಮುಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ

Update: 2025-07-14 17:01 IST

ಮನೋಜ್ ಸಿನ್ಹಾ (Photo credit: PTI)

ಹೊಸದಿಲ್ಲಿ: ಜಮ್ಮುಕಾಶ್ಮೀರದ ಲೆಫ್ಟಿನಂಟ್ ಗವರ್ನರ್(ಎಲ್‌ಜಿ) ಆಗಿ ಐದು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಮನೋಜ್ ಸಿನ್ಹಾ ಅವರು, ಪಹಲ್ಗಾಮ್ ದಾಳಿಯು ಪಾಕಿಸ್ತಾನ ಪ್ರಾಯೋಜಿತವಾಗಿತ್ತು, ಕೋಮು ವಿಭಜನೆಯನ್ನು ಸೃಷ್ಟಿಸುವುದು ಅದರ ಉದ್ದೇಶವಾಗಿತ್ತು. ದಾಳಿಯು ನಿಸ್ಸಂದೇಹವಾಗಿ ಭದ್ರತಾ ವೈಫಲ್ಯವಾಗಿತ್ತು ಮತ್ತು ಅದರ ಸಂಪೂರ್ಣ ಹೊಣೆಯನ್ನು ತಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದಿದ್ದು ದುರದೃಷ್ಟಕರ. ಅಮಾಯಕರನ್ನು ಕ್ರೂರವಾಗಿ ಕೊಲ್ಲಲಾಗಿದೆ.ಭಯೋತ್ಪಾದಕರು ಪ್ರವಾಸಿಗಳನ್ನು ಗುರಿಯಾಗಿಸಿಕೊಳ್ಳುವುದಿಲ್ಲ ಎನ್ನುವುದು ಎನ್ನುವುದು ಇಲ್ಲಿಯ ಸಾಮಾನ್ಯ ನಂಬಿಕೆಯಾಗಿತ್ತು. ದಾಳಿಯು ನಡೆದ ಸ್ಥಳವು ತೆರೆದ ಹುಲ್ಲುಗಾವಲಾಗಿತ್ತು. ಅಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲು ಯಾವುದೇ ಸೌಲಭ್ಯ ಅಥವಾ ಸ್ಥಳವಿರಲಿಲ್ಲ ಎಂದು‌ Times of India ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿನ್ಹಾ ಹೇಳಿದ್ದಾರೆ.

ಅದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಯಾಗಿತ್ತು. ಪ್ರಕರಣದಲ್ಲಿ ಎನ್‌ಐಎ ನಡೆಸಿರುವ ಬಂಧನಗಳು ಸ್ಥಳೀಯರ ಕೈವಾಡವನ್ನು ದೃಢಪಡಿಸಿವೆ, ಆದರೆ ಜಮ್ಮುಕಾಶ್ಮೀರದಲ್ಲಿ ಭದ್ರತಾ ವಾತಾವರಣವು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಈಗಲೇ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಇದೊಂದು ದೇಶದ ಸ್ಥೈರ್ಯಗೆಡಿಸಲು ನಡೆಸಲಾದ ಉದ್ದೇಶಪೂರ್ವಕ ದಾಳಿಯಾಗಿತ್ತು. ಕೋಮು ವಿಭಜನೆಯನ್ನು ಸೃಷ್ಟಿಸುವುದು ಮತ್ತು ದೇಶದ ಇತರ ಭಾಗಗಳಲ್ಲಿ ವಾಸವಾಗಿರುವ ಜಮ್ಮುಕಾಶ್ಮೀರದ ಜನರ ವಿರುದ್ಧ ಪ್ರತೀಕಾರವನ್ನು ಪ್ರಚೋದಿಸುವುದು ಮತ್ತು ತಾವು ಪರಕೀಯರು ಎಂಬ ಭಾವನೆಯನ್ನು ಅವರಲ್ಲಿ ಮೂಡಿಸುವುದು ಪಾಕಿಸ್ತಾನದ ಉದ್ದೇಶವಾಗಿತ್ತು ಎಂದು ಸಿನ್ಹಾ ಹೇಳಿದ್ದಾರೆ.

ಜಮ್ಮುಕಾಶ್ಮೀರವು ಶಾಂತಿಯುತ ಮತ್ತು ಸಮೃದ್ಧವಾಗಿರುವುದನ್ನು ಪಾಕ್ ಬಯಸುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಜಮ್ಮುಕಾಶ್ಮೀರದ ಆರ್ಥಿಕತೆಯ ಗಾತ್ರ ದ್ವಿಗುಣಗೊಂಡಿದೆ. ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಈ ದಾಳಿಯು ಕಾಶ್ಮೀರದ ಆರ್ಥಿಕ ಸುಸ್ಥಿತಿಯ ಮೇಲೆ ಪಾಕಿಸ್ತಾನದ ಹೊಡೆತವಾಗಿದೆ,ಆದರೆ ದಾಳಿಯ ಬಳಿಕ ಕಾಶ್ಮೀರದ ಜನತೆಯ ಖಂಡನೆ ಮತ್ತು ಪ್ರತಿಭಟನೆಗಳು ಪಾಕಿಸ್ತಾನ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ತಕ್ಕ ಉತ್ತರವನ್ನು ನೀಡಿವೆ. ಇಲ್ಲಿ ಇನ್ನು ಮುಂದೆ ಭಯೋತ್ಪಾದನೆ ಸ್ವೀಕಾರಾರ್ಹವಲ್ಲ ಎನ್ನುವುದಕ್ಕೆ ಇವು ಸ್ಪಷ್ಟ ಸಂಕೇತಗಳಾಗಿವೆ ಎಂದಿದ್ದಾರೆ.

ಆಪರೇಷನ್ ಸಿಂಧೂರವು ಪಾಕಿಸ್ತಾನಕ್ಕೆ ಲಕ್ಷ್ಮಣ ರೇಖೆಯನ್ನೆಳೆದಿದೆ,ಅದಕ್ಕೆ ಕಠಿಣ ಸಂದೇಶವನ್ನು ರವಾನಿಸಿದೆ. ಆದರೂ ಭಯೋತ್ಪಾದನೆಯನ್ನು ತನ್ನ ಘೋಷಿತ ಸರಕಾರಿ ನೀತಿಯನ್ನಾಗಿ ಮಾಡಿಕೊಂಡಿರುವ ದೇಶವನ್ನು ನಂಬುವಂತಿಲ್ಲ. ಗೃಹ ಸಚಿವಾಲಯ,ರಕ್ಷಣಾ ಸಚಿವಾಲಯ ಮತ್ತು ಗುಪ್ತಚರ ಸಂಸ್ಥೆಗಳು ಅದರ ಮೇಲೆ ನಿಗಾಯಿರಿಸಿವೆ. ಆಪರೇಷನ್ ಸಿಂಧೂರದ ಬಳಿಕ ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News