ಭಾರತೀಯ ವಾಯುಪಡೆಯ ಬೆನ್ನೆಲುಬಾಗಿದ್ದ ಮಿಗ್-21ಕ್ಕೆ ವಿದಾಯ
'ದೇಶದ ಹೆಮ್ಮೆ' ಎಂದ ರಾಜನಾಥ್ ಸಿಂಗ್
Photo: PTI
ಚಂಡೀಗಢ: ಹಲವು ದಶಕಗಳ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿದ್ದ ಯುದ್ಧವಿಮಾನ ಮಿಗ್-21, ಇಂದು (ಶುಕ್ರವಾರ) ಕೊನೆಯ ಬಾರಿಗೆ ಆಕಾಶದಲ್ಲಿ ಹಾರಾಟ ನಡೆಸಿ, ತನ್ನ ಇತಿಹಾಸವನ್ನು ಅಂತ್ಯಗೊಳಿಸುವ ಮೂಲಕ, ಹಲವಾರು ಸ್ಮರಣೀಯ ನೆನಪುಗಳನ್ನು ಉಳಿಸಿತು.
1960ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾದ ರಶ್ಯ ಸಹಯೋಗದಲ್ಲಿ ನಿರ್ಮಿಸಲಾಗಿದ್ದ ಮಿಗ್-21 ಯುದ್ಧ ವಿಮಾನದ ವಿದಾಯವನ್ನು ಆಚರಿಸಲು ವಿಸ್ತೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಲಾಗಿತ್ತು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಿಗ್-21 ಯುದ್ಧ ವಿಮಾನ ಭಾರತದ ಹೆಮ್ಮೆಯಾಗಿದ್ದು, ಅದರೊಂದಿಗೆ ನಮಗೆ ಆಳವಾದ ಬಾಂಧವ್ಯವಿದೆ. ಅದು ನಮ್ಮಲ್ಲಿ ಆತ್ಮವಿಶ್ವಾಸವನ್ನು ರೂಪಿಸಿತು ಎಂದು ಶ್ಲಾಘಿಸಿದರು.
“ಮಿಗ್-21 ಕೇವಲ ಯುದ್ಧ ವಿಮಾನ ಅಥವಾ ಒಂದು ಯಂತ್ರ ಮಾತ್ರವಾಗಿರಲಿಲ್ಲ; ಅದು ಭಾರತ ಮತ್ತು ರಶ್ಯ ನಡುವಿನ ಆಳವಾದ ಬಾಂಧವ್ಯದ ಪುರಾವೆಯಾಗಿತ್ತು” ಎಂದು ಅವರು ಬಣ್ಣಿಸಿದರು.
“ವೈಮಾನಿಕ ಸೇನೆಯ ಇತಿಹಾಸ ಅದ್ಭುತವಾಗಿದೆ. ಮಿಗ್-21 ನಮ್ಮ ವೈಮಾನಿಕ ಸೇನೆಯ ಪ್ರಯಾಣಕ್ಕೆ ಹೆಮ್ಮೆಯ ಕ್ಷಣಗಳನ್ನು ಸೇರ್ಪಡೆ ಮಾಡಿದೆ” ಎಂದು ಅವರು ಕೊಂಡಾಡಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ವಾಯು ಪಡೆಯ ಮಾಜಿ ಮುಖ್ಯುಸ್ಥರಾದ ಎ.ವೈ.ಟಿಪ್ನಿಸ್, ಎಸ್.ಪಿ.ತ್ಯಾಗಿ ಹಾಗೂ ಬಿ.ಎಸ್.ಧನೋವಾ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಲಿಟ್ಟ ಪ್ರಪ್ರಥಮ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ ಮಿಗ್-21 ಯುದ್ಧ ವಿಮಾನದ ಹಾರಾಟ ನಡೆಸಿದ ಇನ್ನೂ ಹಲವಾರು ಹಿರಿಯ ಪೈಲಟ್ ಗಳು ಉಪಸ್ಥಿತರಿದ್ದರು.