×
Ad

ಮುಂಬೈ ಪೊಲೀಸರ ʼಅತಿಥಿʼಯಾದ ನಕಲಿ IAS ಅಧಿಕಾರಿ!

Update: 2025-07-01 22:22 IST

ದಿಲ್ಲಿಯ ಕೋಚಿಂಗ್ ಸೆಂಟರ್ ಗಳಿರುವ ಬಡಾವಣೆಯ ಗಲ್ಲಿಗಳಲ್ಲಿ, ಕೇಂದ್ರ ಲೋಕಸೇವಾ ಆಯೋಗ ಅಂದ್ರೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಾವಿರಾರು ಯುವಕರಿದ್ದಾರೆ. ದೇಶಾದ್ಯಂತ ಅಂತಹ ಲಕ್ಷಾಂತರ ಯುವಜನರಿದ್ದಾರೆ. ಅವರೆಲ್ಲರ ಕಣ್ಣಲ್ಲೂ ಉನ್ನತ ಅಧಿಕಾರಿಯಾಗುವ ದೊಡ್ಡ ಕನಸು.

ಅಂಥದ್ದೇ ಕನಸನ್ನು ಹೊತ್ತು ಬಿಹಾರದಿಂದ ಬಂದಿದ್ದವನು ಚಂದ್ರಮೋಹನ್ ಪ್ರಸಾದ್ ರಾಂಬಾಲಿ ಸಿಂಗ್. ದಿಲ್ಲಿಯ ಕೋಚಿಂಗ್ ಸೆಂಟರ್ಗಳಲ್ಲಿ ತಿಂಗಳುಗಟ್ಟಲೆ ಅಭ್ಯಾಸ ನಡೆಸಿದ. ಸ್ನೇಹಿತರು ಐಎಎಸ್, ಐಆರ್ಎಸ್ ಅಧಿಕಾರಿಗಳಾಗಿ ಆಯ್ಕೆಯಾಗುವುದನ್ನು ಕಣ್ಣಾರೆ ಕಂಡ.

Full View

ಆದರೆ ವಿಧಿ ಅವನಿಗೆ ಬೇರೆಯೇ ದಾರಿ ತೋರಿಸಿತ್ತು. ಪರೀಕ್ಷೆಯಲ್ಲಿ ನಿರಂತರ ವೈಫಲ್ಯ ಎದುರಾಗುತಿದ್ದರೆ, ಊರಿನವರ ಮತ್ತು ಕುಟುಂಬದವರ ನಿರೀಕ್ಷೆಗಳ ಒತ್ತಡದಿಂದ ಕುಗ್ಗಿ ಹೋಗಿದ್ದ. ತನ್ನಿಂದ ಯುಪಿಎಸ್ಸಿ ಪಾಸು ಮಾಡಲು ಆಗಲಿಲ್ಲ ಎಂದು ಒಪ್ಪಿಕೊಂಡು ಅದನ್ನು ಕುಟುಂಬಕ್ಕೆ ತಿಳಿಸಲು ಆತ ಹಿಂಜರಿದ. ಇವತ್ತಲ್ಲ ನಾಳೆ ಆಗೇ ಆಗುತ್ತೇನೆ ಎಂದೇ ಹೇಳಿದ. ಕೊನೆಗೂ ಆ ಕನಸು ನನಸಾಗದಾಗ, ತಾನು ಕೂಡ ಐಎಎಸ್ ಅಧಿಕಾರಿಯೆಂದು ಹೇಳಿಕೊಳ್ಳುವ ನಿರ್ಧಾರಕ್ಕೆ ಬಂದ.

ಅಲ್ಲಿಂದ ಶುರುವಾಗಿದ್ದು ಸರಣಿ ಸುಳ್ಳಿನ ಜಗತ್ತು. ನಿಜ ಜೀವನದಲ್ಲಿ ಸಾಧ್ಯವಾಗದಿದ್ದನ್ನು, ಕಟ್ಟುಕಥೆಯಲ್ಲಿ ಸಾಧಿಸಲು ಹೊರಟ ಚಂದ್ರಮೋಹನ್ ಪ್ರಸಾದ್ . ಇದೇ ಹುಚ್ಚು ಕಲ್ಪನೆಯೊಂದಿಗೆ ಮುಂಬೈಗೆ ಬಂದಿಳಿದ ಈ ನಕಲಿ ಅಧಿಕಾರಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಾಂದ್ರಾದ ಕಸ್ಟಮ್ಸ್ ಅತಿಥಿ ಗೃಹದಲ್ಲಿ ಆತ ಅನುಭವಿಸುತ್ತಿದ್ದ ಬಣ್ಣದ ಬದುಕಿಗೆ ತೆರೆ ಬಿದ್ದಿದೆ.

ಉನ್ನತ ಅಧಿಕಾರಿ ಆಗುವ ಕನಸು ಕಂಡಿದ್ದ ಬಿಹಾರದ ವ್ಯಕ್ತಿ, ಮುಂಬೈನಲ್ಲಿ ನಕಲಿ ಐಎಎಸ್ ಅಧಿಕಾರಿಯಾಗಿ ಹೋಗಿ ಬಂಧನಕ್ಕೊಳಗಾಗಿದ್ದಾನೆ. 32 ವರ್ಷದ ಚಂದ್ರಮೋಹನ್ ಪ್ರಸಾದ್ ಮುಂಬೈನಲ್ಲಿ ನಕಲಿ ಗುರುತಿನ ಚೀಟಿ ಬಳಸಿ ವಂಚನೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಬಿಹಾರದ ವೈಶಾಲಿ ಜಿಲ್ಲೆಯ ನಿವಾಸಿಯಾದ ಚಂದ್ರಮೋಹನ್ ಪ್ರಸಾದ್ ರಾಂಬಾಲಿ ಸಿಂಗ್ ಕಸ್ಟಮ್ಸ್ ಇಲಾಖೆಯ ಬಾಂದ್ರಾ ಅತಿಥಿ ಗೃಹದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜೂನ್ 28 ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ದಹಿಸರ್ ಘಟಕ 12 ರ ಕಾನ್ಸ್ಟೇಬಲ್ ಲಕ್ಷ್ಮಣ ಬಾಗವೆ ಮತ್ತು ಇನ್ಸ್ಪೆಕ್ಟರ್ ಬಾಲಾಸಾಹೇಬ ರಾವುತ್ ಅವರು ಗಸ್ತು ತಿರುಗುತ್ತಿದ್ದಾಗ ಬಿಳಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಲಭಿಸಿತು.

ಅದರಂತೆ ಕಾರನ್ನು ಹಿಂಬಾಲಿಸಿ , ಮಲಾಡ್ ನ ಕೈಗಾರಿಕಾ ಎಸ್ಟೇಟ್ ನ ಸಿಲ್ವರ್ ಓಕ್ ಹೋಟೆಲ್ ಬಳಿ ಆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ವಾಹನದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸಿಂಗ್, ತಾನು ಗೃಹ ಸಚಿವಾಲಯದ " ಭದ್ರತೆ ವಿಭಾಗದ ಸಹಾಯಕ ನಿರ್ದೇಶಕ" ಎಂದು ಹೇಳಿಕೊಂಡು 2028 ರವರೆಗೆ ಮಾನ್ಯತೆಯಿರುವ ಗುರುತಿನ ಚೀಟಿಯನ್ನು ತೋರಿಸಿದ್ದಾನೆ.

ಆದರೆ ಅಧಿಕಾರಿಗಳಿಗೆ ಆ ಗುರುತಿನ ಚೀಟಿ ನಕಲಿ ಎಂದು ಸಂಶಯ ಬಂತು. ವಿಚಾರಣೆ ನಡೆಸಿದಾಗ, ಸಿಂಗ್ 2017 ರಲ್ಲಿ ದಿಲ್ಲಿಗೆ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಲು ಹೋಗಿದ್ದ ಮತ್ತು 2022 ರಲ್ಲಿ ಆತನ ಕೆಲವು ಸ್ನೇಹಿತರು ಐಎಎಸ್ ಮತ್ತು ಐಆರ್ಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಆದರೆ ಈತನಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಊರಿನಲ್ಲಿ ಸಂಬಂಧಿಕರು ಪದೇ ಪದೇ ಕೇಳುತ್ತಿದ್ದರಿಂದ ಮುಖಭಂಗ ತಪ್ಪಿಸಿಕೊಳ್ಳಲು ತಾನು ಐಎಎಸ್ ಅಧಿಕಾರಿಯಾಗಿದ್ದೇನೆ ಎಂದು ಸುಳ್ಳು ಹೇಳಿದ್ದನ್ನು ಒಪ್ಪಿಕೊಂಡಿದ್ದಾನೆ.

ಮುಂಬೈಗೆ ಮೂರು ದಿನಗಳ ಪ್ರವಾಸಕ್ಕೆ ಬಂದಿದ್ದ ಸಿಂಗ್, ತನಗೆ ಪರಿಚಯವಿದ್ದ ಸರ್ಕಾರಿ ನೌಕರನೊಬ್ಬನ ಸಹಾಯದಿಂದ ಬಾಂದ್ರಾದ ಪ್ರತಿಷ್ಠಿತ ಕಸ್ಟಮ್ಸ್ ಅತಿಥಿ ಗೃಹದಲ್ಲಿ ಎರಡು ದಿನಗಳ ಕಾಲ ತಂಗಿದ್ದ.

ಇದಲ್ಲದೆ, ನಗರದಲ್ಲಿ ಓಡಾಡಲು ಫರ್ದಿನ್ ಸೈಫಿ ಎಂಬ 24 ವರ್ಷದ ಚಾಲಕನನ್ನು ಬಾಡಿಗೆಗೆ ಪಡೆದಿದ್ದ. ಈತ ಮುಂಬೈಗೆ ಬಂದಿರುವ ಇನ್ನೋರ್ವ ಸರ್ಕಾರಿ ಅಧಿಕಾರಿಯನ್ನು ಕರೆದೊಯ್ಯಲು ಬಂದಿರುವುದಾಗಿ ಚಾಲಕನಿಗೆ ತಿಳಿಸಿದ್ದ. ಅಷ್ಟೇ ಅಲ್ಲದೆ, ಬಂಧನಕ್ಕೊಳಗಾಗುವ ಹಿಂದಿನ ದಿನ ದಾದರ್ ನಲ್ಲಿ ಸಂಚಾರ ಪೊಲೀಸರಿಗೆ ಇದೇ ನಕಲಿ ಗುರುತಿನ ಚೀಟಿಯನ್ನು ತೋರಿಸಿ ಸಿಕ್ಕಿಬಿದ್ದಿದ್ದನಂತೆ.

ಪೊಲೀಸರು ಚಂದ್ರಮೋಹನ್ ನ ವಿಚಾರಣೆ ನಡೆಸಿದಾಗ , ನಕಲಿ ಗುರುತಿನ ಚೀಟಿಯ ಜೊತೆಗೆ 16 ವಿಸಿಟಿಂಗ್ ಕಾರ್ಡ್ಗಳು, ಎರಡು ಮೊಬೈಲ್ ಫೋನ್ಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಸ್ವಲ್ಪ ಹಣ ಪತ್ತೆಯಾಗಿವೆ. ಈ ಗುರುತಿನ ಚೀಟಿಯನ್ನು ತಾನೇ ವಿನ್ಯಾಸಗೊಳಿಸಿದ್ದು ಅನೇಕ ಜನರನ್ನು ನಂಬಿಸಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಈ ವಂಚನೆಯ ಹಿಂದೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರಿನ ಮಾಲೀಕ ಮತ್ತು ಅತಿಥಿ ಗೃಹವನ್ನು ಬುಕ್ ಮಾಡಲು ಸಹಾಯ ಮಾಡಿದ ವ್ಯಕ್ತಿಯನ್ನೂ ವಿಚಾರಣೆ ನಡೆಸಲಾಗುತ್ತಿದೆ. ಚಂದ್ರಮೋಹನ್ ನನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 204 (ಸಾರ್ವಜನಿಕ ಸೇವಕನಂತೆ ನಟಿಸುವುದು), 336(2) (ನಕಲಿ ದಾಖಲೆ), 336(3) (ಸುಳ್ಳು ದಾಖಲೆ ತಯಾರಿಸುವುದು) ಮತ್ತು 340 (ನಕಲಿ ದಾಖಲೆಯನ್ನು ಅಸಲಿಯೆಂದು ಬಳಸುವುದು) ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಈತ ಯಾವುದೇ ಆರ್ಥಿಕ ವಂಚನೆ ಮಾಡಿರುವ ಪ್ರಕರಣ ಈವರೆಗೆ ಸಿಗದೇ ಇದ್ದರೂ , ನಕಲಿ ಗುರುತಿನ ಚೀಟಿಯೊಂದಿಗೆ ಐಎಎಸ್ ಅಧಿಕಾರಿಯಂತೆ ಓಡಾಡುವುದು ಕೂಡ ದೊಡ್ಡ ಅಪರಾಧ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದಂತಹ ತೀರಾ ಹಿಂದುಳಿದ ರಾಜ್ಯಗಳಲ್ಲಿ ಸರಕಾರೀ ಉದ್ಯೋಗವೇ ದೊಡ್ಡ ಆಸರೆ. ಅದರಲ್ಲೂ ಐಎಎಸ್ ಹುದ್ದೆಗಾಗಿ ಅಲ್ಲಿ ಬಾಲ್ಯದಿಂದಲೇ ತಯಾರಿ ಶುರುವಾಗುತ್ತದೆ. ಇಡೀ ಕುಟುಂಬ ಆತನನ್ನೇ ನೆಚ್ಚಿಕೊಂಡಿರುತ್ತದೆ. ಹಾಗಾಗಿ ತೀವ್ರ ಒತ್ತಡ ಸಹಜ. ಅದನ್ನು ಎದುರಿಸುವ ಧೈರ್ಯ ಸಾಲದೇ ಚಂದ್ರಮೋಹನ್ ದೊಡ್ಡ ಎಡವಟ್ಟನ್ನೇ ಮಾಡಿಕೊಂಡಿದ್ದಾನೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News