×
Ad

ಉತ್ತರಪ್ರದೇಶ | ಸ್ವಚ್ಛತಾ ಕೊರತೆಯ ಹೊಣೆಹೊತ್ತು ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ಬಸ್ಕಿ ತೆಗೆದ ಐಎಎಸ್ ಅಧಿಕಾರಿ : ವೀಡಿಯೊ ವೈರಲ್

Update: 2025-07-30 13:17 IST

Photo credit: NDTV

ಹೊಸದಿಲ್ಲಿ: ಐಎಎಸ್ ಅಧಿಕಾರಿಯೋರ್ವರು ಪ್ರತಿಭಟನಾ ನಿರತ ವಕೀಲರ ಮುಂದೆ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ತೆಗೆಯುವ ವೀಡಿಯೊ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಈ ವಿಡಿಯೋ ಉತ್ತರಪ್ರದೇಶದ ಶಹಜಹಾನ್‌ಪುರದ್ದಾಗಿದೆ. ಐಎಎಸ್ ಅಧಿಕಾರಿಯನ್ನು ರಿಂಕು ಸಿಂಗ್ ಎಂದು ಗುರುತಿಸಲಾಗಿದೆ. ರಿಂಕು ಸಿಂಗ್ ತಹಸಿಲ್‌ನಲ್ಲಿ ಸ್ವಚ್ಛತಾ ಕೊರತೆಯ ಹೊಣೆಹೊತ್ತು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡ ಮೊದಲ ದಿನವೇ ಬಸ್ಕಿ ತೆಗೆದಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ, ಶಹಜಹಾನ್‌ಪುರದ ಪೊವಾಯನ್ ತಹಸಿಲ್‌ನ ಹೊಸ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿ ರಿಂಕು ಸಿಂಗ್ ಅಧಿಕಾರ ವಹಿಸಿಕೊಂಡಿದ್ದರು. ಅವರು ಪಟ್ಟಣದಲ್ಲಿ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿ ತೆರೆದ ಸ್ಥಳದಲ್ಲಿ ಮೂತ್ರ ವಿಸರ್ಜಿಸುತ್ತಿದ್ದವರಲ್ಲಿ ಬಸ್ಕಿ ತೆಗೆಸಿದ್ದಾರೆ. ಇದಲ್ಲದೆ ಕೆಲವು ಶಾಲಾ ವಿದ್ಯಾರ್ಥಿಗಳ ಜೊತೆ ಪೋಷಕರು ಸುತ್ತಾಡುವುದನ್ನು ಗಮನಿಸಿ ಪೋಷಕರಿಗೆ ಬಸ್ಕಿ ತೆಗೆಯುವ ಶಿಕ್ಷೆಯನ್ನು ನೀಡಿದ್ದಾರೆ.

ಅಧಿಕಾರಿಯ ಈ ಕ್ರಮವು ಕೆಲವು ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಯ ನಡೆಯನ್ನು ಖಂಡಿಸಿ ಕೆಲ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ವಕೀಲ ವೀರೇಂದ್ರ ಕುಮಾರ್ ಯಾದವ್ ಮಾತನಾಡಿ, ಎಸ್‌ಡಿಎಂ ಪರಿಶೀಲನೆ ವೇಳೆ ನಮ್ಮ ಗುಮಾಸ್ತ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಅವರಿಗೆ ತಡೆದು ಬಸ್ಕಿ ತೆಗೆಸಲಾಗಿದೆ ಎಂದು ಹೇಳಿದ್ದಾರೆ.

ಪ್ರತಿಭಟನಾ ನಿರತ ವಕೀಲರನ್ನು ಭೇಟಿ ಮಾಡಿ ಅವರ ಜೊತೆ ರಿಂಕು ಸಿಂಗ್ ಮಾತುಕತೆಗೆ ಮುಂದ್ದಾಗಿದ್ದಾರೆ. ಸಾರ್ವಜನಿಕ ಸ್ವಚ್ಚತೆ ಕಾಪಾಡಲು ಈ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಅವರು ವಕೀಲರಿಗೆ ಉತ್ತರಿಸಿದ್ದರು. ಈ ವೇಳೆ ವಕೀಲರು ಕಚೇರಿಯ ಆವರಣ ಕೊಳಕಾಗಿದೆ ಅದಕ್ಕೆ ನೀವು ಬಸ್ಕಿ ತೆಗೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಿಂಕು ಸಿಂಗ್, ಹೌದು ಅದು ನನ್ನ ತಪ್ಪು ಎಂದು ಬಸ್ಕಿ ತೆಗೆದಿದ್ದಾರೆ ಎಂದು ಹೇಳಲಾಗಿದೆ.

ಎಸ್‌ಡಿಎಂ ರಿಂಕು ಸಿಂಗ್ ವಕೀಲರ ನಡುವೆ ಕಿವಿ ಹಿಡಿದು ಬಸ್ಕಿ ತೆಗೆಯುವ ವೀಡಿಯೊ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News