×
Ad

ಐಸಿಸಿ ಚಾಂಪಿಯನ್ಸ್ ಟ್ರೋಫಿ: ವಿಜೇತ ತಂಡಕ್ಕೆ 19.45 ಕೋ.ರೂ.ಬಹುಮಾನ

Update: 2025-02-14 21:22 IST

PC ; ICC

ಹೊಸದಿಲ್ಲಿ: ಎಂಟು ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ವಾಪಸಾಗುತ್ತಿದೆ. ಎಂಟು ತಂಡಗಳು ಭಾಗವಹಿಸಲಿರುವ ಪಂದ್ಯಾವಳಿಯಲ್ಲಿ ಮಾ.9ರಂದು ನಡೆಯಲಿರುವ ಫೈನಲ್‌ನಲ್ಲಿ ವಿಜೇತ ತಂಡವು ಟ್ರೋಫಿಯ ಜೊತೆಗೆ 2.24 ಮಿಲಿಯನ್ ಡಾಲರ್(19.45 ಕೋ.ರೂ.)ಬಹುಮಾನ ಮೊತ್ತವನ್ನು ಸ್ವೀಕರಿಸಲಿದೆ.

ರನ್ನರ್ಸ್-ಅಪ್ ತಂಡವು 1.12 ಮಿಲಿಯನ್ ಡಾಲರ್(9.72 ಕೋ.ರೂ.)ಹಾಗೂ ಸೆಮಿ ಫೈನಲ್‌ನಲ್ಲಿ ಸೋಲುವ ತಂಡಗಳು 560,000 ಯು.ಎಸ್. ಡಾಲರ್ (ತಲಾ 4.86 ಕೋ.ರೂ.)ಜೇಬಿಗಿಳಿಸಲಿವೆ. 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯ ಒಟ್ಟು ಬಹುಮಾನ ಮೊತ್ತ 6.9 ಮಿಲಿಯನ್ ಡಾಲರ್(59 ಕೋ.ರೂ.)ಆಗಿದ್ದು 2017ರ ಆವೃತ್ತಿಯ ಪಂದ್ಯಾವಳಿಯ ಬಹುಮಾನ ಮೊತ್ತಕ್ಕಿಂತ ಶೇ.53ರಷ್ಟು ಹೆಚ್ಚಿಸಲಾಗಿದೆ.

ತಂಡಗಳು ಪ್ರತಿ ಗ್ರೂಪ್ ಪಂದ್ಯಗಳ ಗೆಲುವಿನಿಂದ 34,000 ಡಾಲರ್‌ಗೂ ಅಧಿಕ(29 ಲಕ್ಷ ರೂ.)ಆದಾಯ ಗಳಿಸಲಿವೆ. ಐದನೇ ಹಾಗೂ ಆರನೇ ಸ್ಥಾನ ಪಡೆಯುವ ತಂಡಗಳು 350,000 ಡಾಲರ್(ತಲಾ 3.04 ಕೋ.ರೂ.)ಸ್ವೀಕರಿಸಲಿವೆ. 7ನೇ ಹಾಗೂ 8ನೇ ಸ್ಥಾನ ಪಡೆಯುವ ತಂಡಗಳು 140,000 ಡಾಲರ್(1.21 ಕೋ.ರೂ.)ಪಡೆದುಕೊಳ್ಳಲಿವೆ.

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಪರ್ಧಿಸುವ ಪ್ರತಿಯೊಂದು ತಂಡಗಳು 125,000 ಡಾಲರ್(1.08 ಕೋ.ರೂ.)ಪಡೆಯಲಿವೆ.

ಪಾಕಿಸ್ತಾನವು 1996ರ ನಂತರ ಮೊದಲ ಬಾರಿ ಜಾಗತಿಕ ಕ್ರಿಕೆಟ್ ಟೂರ್ನಮೆಂಟ್‌ನ ಆತಿಥ್ಯವಹಿಸಲಿದೆ. ಪಂದ್ಯಗಳು ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿಯ ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನ ಎರಡು ಅಗ್ರ ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಪುರುಷರ ಚಾಂಪಿಯನ್ಸ್ ಟ್ರೋಫಿಯು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದರಲ್ಲಿ ವಿಶ್ವದ ಅಗ್ರಮಾನ್ಯ 8 ಏಕದಿನ ಕ್ರಿಕೆಟ್ ತಂಡಗಳು ಭಾಗವಹಿಸುತ್ತಿವೆ. ಟಿ-20 ಮಾದರಿಯ ಮಹಿಳೆಯರ ಚಾಂಪಿಯನ್ಸ್ ಟ್ರೋಫಿಯು 2027ರಲ್ಲಿ ಆರಂಭವಾಗಲಿದೆ.

‘‘2025ರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಒಂದು ಪ್ರಮುಖ ಕ್ಷಣವನ್ನು ಪ್ರತಿನಿಧಿಸುತ್ತದೆ. ಇದು ಏಕದಿನ ಪ್ರತಿಭೆಯ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತದೆ. ಅಲ್ಲಿ ಪ್ರತಿ ಪಂದ್ಯವೂ ನಿರ್ಣಾಯಕವಾಗಿದೆ. ಬಹುಮಾನ ಮೊತ್ತದಲ್ಲಿ ಗಣನೀಯ ಹೆಚ್ಚಳವು ಕ್ರೀಡೆಯಲ್ಲಿ ಹೂಡಿಕೆ ಮಾಡುವ ಹಾಗೂ ನಮ್ಮ ಕಾರ್ಯಕ್ರಮಗಳ ಜಾಗತಿಕ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಐಸಿಸಿಯ ನಿರಂತರ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಆರ್ಥಿಕ ಪ್ರೋತ್ಸಾಹದ ಹೊರತಾಗಿ, ಈ ಪಂದ್ಯಾವಳಿಯು ತೀವ್ರ ಸ್ಪರ್ಧೆಯನ್ನು ಹುಟ್ಟುಹಾಕಲಿದೆ, ವಿಶ್ವದಾದ್ಯಂತ ಅಭಿಮಾನಿಗಳನ್ನು ಆಕರ್ಷಿಸಲಿದೆ ಹಾಗೂ ಭವಿಷ್ಯದ ಪೀಳಿಗೆಗೆ ಕ್ರಿಕೆಟ್‌ನ ಬೆಳವಣಿಗೆ ಹಾಗೂ ದೀರ್ಘಕಾಲದ ಸುಸ್ಥಿರತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ’’ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಕಟನೆಯೊಂದರಲ್ಲಿ ಆಶಾವಾದ ವ್ಯಕ್ತಪಡಿಸಿದ್ದಾರೆ.

*ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತದ ವಿವರ

ಚಾಂಪಿಯನ್ಸ್: 2.24 ಮಿಲಿಯನ್ ಡಾಲರ್(19.45 ಕೋ.ರೂ.)

ರನ್ನರ್ಸ್ ಅಪ್: 1.12 ಮಿಲಿಯನ್ ಡಾಲರ್(9.72 ಕೋ.ರೂ.)

ಸೆಮಿ ಫೈನಲ್‌ನಲ್ಲಿ ಸೋತ ತಂಡಗಳು(2): 560,000 ಡಾಲರ್(ತಲಾ 4.86 ಕೋ.ರೂ.)

ಐದನೇ, ಆರನೇ ಸ್ಥಾನ: 350,000 ಡಾಲರ್(ತಲಾ 3.04 ಕೋ.ರೂ.)

ಏಳನೇ, ಎಂಟನೇ ಸ್ಥಾನ: 140,000 ಡಾಲರ್(1.21 ಕೋ.ರೂ.)

ಗ್ರೂಪ್ ಹಂತದ ವಿಜೇತ ತಂಡಗಳಿಗೆ: 34,000 ಡಾಲರ್(29 ಲಕ್ಷ ರೂ.)

ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳಿಗೆ (8 ತಂಡಗಳು): 125,000 ಡಾಲರ್(1.08 ಕೋ.ರೂ.)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News