×
Ad

ಛತ್ತೀಸ್ ಗಢ | ಪೊಲೀಸರನ್ನು ಕರೆಸಿ ನಿಮ್ಮನ್ನು ಹೊರದಬ್ಬುತ್ತೇವೆ : ವಂಚನೆ ವಿರುದ್ಧ ಪ್ರತಿಭಟನಾ ನಿರತ ಮಹಿಳೆಯರಿಗೆ ಬೆದರಿಸಿದ ಸಚಿವ

Update: 2025-01-14 19:47 IST

Photo | NDTV

ರಾಯ್ಪುರ: ಫ್ಲೋರಾ ಮ್ಯಾಕ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಬೃಹತ್ ವಂಚನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರಿಗೆ ಛತ್ತೀಸ್ ಗಢದ ಕೈಗಾರಿಕಾ ಸಚಿವ ಲಖನ್ ಲಾಲ್ ದೇವಾಂಗನ್ ನೀವು ಹೆಚ್ಚು ಅಹಂಕಾರವನ್ನು ತೋರಿಸಿದರೆ, ನಾವು ಪೊಲೀಸರನ್ನು ಕರೆಸಿ ನಿಮ್ಮನ್ನು ಹೊರದಬ್ಬುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಫ್ಲೋರಾ ಮ್ಯಾಕ್ಸ್ ಕಂಪನಿಯು ಕೊರ್ಬಾ ನಗರದ ಮಹಿಳೆಯರಿಗೆ ಸುಮಾರು 500 ಕೋಟಿ ರೂ. ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ. ನ್ಯಾಯ ಮತ್ತು ಸಾಲ ಮನ್ನಾಕ್ಕೆ ಆಗ್ರಹಿಸಿ ಮಹಿಳೆಯರು ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

ಜನವರಿ 12ರಂದು ಸಚಿವ ಲಖನ್ ಲಾಲ್ ದೇವಾಂಗನ್ ಅವರು ಕೃಷಿ ಸಚಿವ ರಾಮ್ ವಿಚಾರ್ ನೇತಮ್ ಅವರೊಂದಿಗೆ ಕೊರ್ಬಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಕಂಪೆನಿಯಿಂದ ವಂಚನೆಗೆ ಒಳಗಾಗಿದ್ದ ಮಹಿಳೆಯರ ಗುಂಪು ಸಚಿವರನ್ನು ಸುತ್ತುವರಿದು ವಂಚನೆ ಮಾಡಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ವೇಳೆ ನೀವು ಹೆಚ್ಚು ದುರಹಂಕಾರವನ್ನು ತೋರಿಸಿದರೆ, ನಾವು ಪೊಲೀಸರನ್ನು ಕರೆಸಿ ನಿಮ್ಮನ್ನು ಹೊರದಬ್ಬುತ್ತೇವೆ ಎಂದು ಬೆದರಿಸಿದ್ದಾರೆ.

ಈ ವೇಳೆ ಹಾಜರಿದ್ದ ಸಚಿವ ರಾಮ್ ವಿಚಾರ್ ನೇತಮ್ ಮಾತನಾಡಿ, ನೀವು ರಸ್ತೆ ತಡೆ ಮಾಡಬೇಡಿ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.

ಫ್ಲೋರಾ ಮ್ಯಾಕ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ನಕಲಿ ಸ್ಕೀಂ ಮೂಲಕ ಮಹಿಳೆಯರನ್ನು ವಂಚಿಸಿದೆ. ಕಂಪೆನಿಯು ಮಹಿಳೆಯರಿಂದ 30,000ರೂ. ಸಂಗ್ರಹಿಸಿದ್ದು, 35,000 ರೂ.ಮೌಲ್ಯದ ಸರಕುಗಳೊಂದಿಗೆ 2,700 ರೂ. ಮಾಸಿಕ ಆದಾಯ ನೀಡುವ ಭರವಸೆ ನೀಡಿತ್ತು. ಅಕ್ರಮಗಳು ಬೆಳಕಿಗೆ ಬಂದಾಗ ಪೊಲೀಸರು ಕಂಪೆನಿಯನ್ನು ಸೀಲ್ ಮಾಡಿದ್ದಾರೆ.

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಲಖನ್ ಲಾಲ್ ದೇವಾಂಗನ್, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಕಂಪೆನಿ ಹುಟ್ಟಿಕೊಂಡಿದೆ. ನಮ್ಮ ಸರಕಾರ ಇಂತಹ ಕಂಪೆನಿಗಳನ್ನು ನಿಷೇಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ 12 ಮಂದಿಯನ್ನು ಬಂಧಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಛತ್ತೀಸ್ ಗಢದ ಮಾಜಿ ಸಿಎಂ ಭೂಪೇಶ್ ಬಾಘೇಲ್, ಬಿಜೆಪಿ ಸಚಿವರು ಬೀದಿ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ʼಇವರು ಲಖನ್ ಲಾಲ್ ದೇವಾಂಗನ್ ಜೀ. ಅವರು ನಮ್ಮ ರಾಜ್ಯದ ಮಂತ್ರಿ. ಆದರೆ, ಅವರು ಮಹಿಳೆಯರೊಂದಿಗೆ ಬೀದಿ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ನೀವು ಎಷ್ಟೇ ದೊಡ್ಡ ಸಚಿವರಾಗಿದ್ದರೂ ಮಹಿಳೆಯರನ್ನು ಹೊರಹಾಕುವ ಧೈರ್ಯವಿದೆಯೇ? ಅದೂ ಕೂಡ ಪೊಲೀಸರನ್ನು ಕರೆಯುವ ಮೂಲಕ, ಇದು ಬಿಜೆಪಿಯ ಮನಸ್ಥಿತಿ. ಆರೆಸ್ಸೆಸ್ ಬೋಧನೆಗಳು. ಆದರೆ ನಿಮ್ಮ ಗೂಂಡಾಗಿರಿಯನ್ನು ನಾವು ಮುಂದುವರಿಸಲು ಬಿಡುವುದಿಲ್ಲ, ನಮ್ಮ ಸಹೋದರಿಯರನ್ನು ಮುಟ್ಟಲು ಬಿಡುವುದಿಲ್ಲʼ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News