×
Ad

“ಭಾರತದಲ್ಲಿರಬೇಕಾದರೆ ಮೋದಿ, ಯೋಗಿಗೆ ಮತ ಹಾಕಿ”: ನಾಲ್ವರನ್ನು ಗುಂಡು ಹಾರಿಸಿ ಕೊಂದ ಪೇದೆಯ ವಿಡಿಯೋ ವೈರಲ್

Update: 2023-07-31 23:15 IST

Screengrab: Twitter/@zoo_bear

ಮುಂಬೈ: ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಚೇತನ್ ಸಿಂಗ್ ಮುಂಬೈ ರೈಲಿನಲ್ಲಿ ಸೋಮವಾರ ಬೆಳಗ್ಗೆ ನಡೆಸಿದ ಗುಂಡಿನ ದಾಳಿಯ ಬಳಿಕ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮುಸ್ಲಿಮರನ್ನು ಗುರಿಯಾಗಿಸಿ ಹತ್ಯೆ ನಡೆಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಘಾತ ವ್ಯಕ್ತಪಡಿಸಿದ್ದಾರೆ.

“ನೀವು (ಮುಸ್ಲಿಮರು) ಭಾರತದಲ್ಲಿ ಬದುಕಬೇಕಾದರೆ ಮೋದಿ ಹಾಗೂ ಯೋಗಿಗೆ ಮತ ಹಾಕಬೇಕು” ಎಂದು ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಬಳಿಕ ಆರ್‌ಪಿಎಫ್‌ ಕಾನ್‌ಸ್ಟೇಬಲ್‌ ಚೇತನ್ ಸಿಂಗ್ ಹೇಳುತ್ತಿರುವುದು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಮುಸ್ಲಿಮರ ವಿರುದ್ಧ ಹಿಂದುತ್ವ ರಾಜಕಾರಣ ಹಾಗೂ ಮಾಧ್ಯಮಗಳು ಹಬ್ಬುತ್ತಿರುವ ಸುಳ್ಳುಗಳೇ ಈ ಭೀಕರ ಕೃತ್ಯಕ್ಕೆ ಕಾರಣ ಎಂದು ಹಲವು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

ಸೋಮವಾರ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ತನ್ನ ಸ್ವಯಂಚಾಲಿತ ರೈಫಲ್‌ನಿಂದ ಆರೋಪಿ ಗುಂಡು ಹಾರಿಸಿದ್ದು, ತನ್ನ ಆರ್‌ಪಿಎಫ್ ಸಹೋದ್ಯೋಗಿ ಎಎಸ್‌ಐ ಟಿಕಾ ರಾಮ್ ಮೀನಾ ಹಾಗೂ ರೈಲಿನಲ್ಲಿ ಮುಂಬೈಗೆ ತೆರಳುತ್ತಿದ್ದ ಮೂವರು ಪ್ರಯಾಣಿಕರನ್ನು ಕೊಂದು ಪರಾರಿಯಾಗಿದ್ದನು. ಆ ಬಳಿಕ ಘಟನೆಯ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆರೋಪಿಯನ್ನು ಶಸ್ತಾಸ್ತ್ರ ಸಮೇತ ಪೊಲೀಸರು ಬಂಧಿಸಿದ್ದರು.

ಮೃತ ಪ್ರಯಾಣಿಕರನ್ನು ಅಬ್ದುಲ್ ಖಾದಿರ್ಭಾಯಿ ಮುಹಮ್ಮದ್ ಹುಸೇನ್ ಭಾನ್ಪುರ್ವಾಲಾ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸದರ್ ಮಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ freepressjournal.in ವರದಿ ಮಾಡಿದೆ.

ಘಟನೆ ವಿಡಿಯೋವನ್ನು ಪತ್ರಕರ್ತೆ ರಾಣಾ ಅಯ್ಯೂಬ್ ಟ್ವೀಟ್ ಮಾಡಿದ್ದು, “ಪ್ರಧಾನಿ ಮೋದಿ, ಇದು ನಿಮ್ಮ ಪಕ್ಷದ ನಾಯಕರ ಮುಸ್ಲಿಂ ವಿರೋಧಿ ದ್ವೇಷ ಭಾಷಣದ ಪರಿಣಾಮ” ಎಂದು ಆರೋಪಿಸಿದ್ದಾರೆ. altnews.in ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮಹಮ್ಮದ್ ಝುಬೈರ್ ಅವರೂ ಆರೋಪಿ ಪೇದೆ ಎಚ್ಚರಿಕೆ ನೀಡುವ ವಿಡಿಯೋಟ್ವೀಟ್ ಮಾಡಿದ್ದಾರೆ.

ಮುಂಬೈ ಘಟನೆ ಭಯೋತ್ಪಾದನಾ ದಾಳಿ: ಉವೈಸಿ

ಮಹಾರಾಷ್ಟ್ರದಲ್ಲಿ ರೈಲಿನಲ್ಲಿ ಆರ್‌ಪಿಎಫ್ ಕಾನ್ಸ್‌ಟೇಬಲ್ ನಾಲ್ವರನ್ನು ಗುಂಡಿಕ್ಕಿ ಕೊಂದಿರುವ ಭೀಕರ ಘಟನೆಯನ್ನು "ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದನಾ ದಾಳಿ" ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಸೋಮವಾರ ಹೇಳಿದ್ದಾರೆ.

ಇದಕ್ಕೆ ನಿರಂತರ ಮುಸ್ಲಿಂ ವಿರೋಧಿ ದ್ವೇಷ ಭಾಷಣ ಕಾರಣ ಎಂದು ಹೇಳಿರುವ ಅವರು, ದ್ವೇಷದ ಭಾಷಣವನ್ನು ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಇಷ್ಟವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News