ಐಐಎಂ-ಕೋಲ್ಕ್ಕತ್ತಾ ಅತ್ಯಾಚಾರ ಪ್ರಕರಣ | ತನಿಖೆಗೆ ಪಶ್ಚಿಮ ಬಂಗಾಳ ಪೊಲೀಸರಿಂದ ಎಸ್ಐಟಿ ರಚನೆ
PC | timesofindia
ಕೋಲ್ಕತಾ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೋಲ್ಕತ್ತಾ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ ಆರೋಪದ ಕುರಿತು ತನಿಖೆ ನಡೆಸಲು ಪಶ್ಚಿಮಬಂಗಾಳ ಪೊಲೀಸರು 9 ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರೂಪಿಸಿದ್ದಾರೆ.
ವಿದ್ಯಾರ್ಥಿನಿಯ ತಂದೆ ತನ್ನ ಪುತ್ರಿಯ ಆರೋಪವನ್ನು ನಿರಾಕರಿಸಿದ ಹಾಗೂ ಆಕೆ ಆಟೋ ರಿಕ್ಷಾದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ ಎಂದು ಪ್ರತಿಪಾದಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಪ್ರಕರಣದ ತನಿಖೆಗೆ ಕೋಲ್ಕತ್ತಾ ಪೊಲೀಸ್‌ನ ನೈಋತ್ಯ ವಿಭಾಗದ ಉಪ ಪೊಲೀಸ್ ಆಯುಕ್ತ 9 ಸದಸ್ಯರ ತಂಡವನ್ನು ರೂಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಐಎಂ ಕೋಲ್ಕತ್ತಾ ಕ್ಯಾಂಪಸ್ ನಲ್ಲಿರುವ ಪುರುಷರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ಆಕೆ ಹರಿದೇವ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ಕೋಲ್ಕತ್ತಾ ಪೊಲೀಸರು ಆರೋಪಿ ಮಹಾವೀರ್ ಟೊಪ್ಪಣ್ಣವರ್ ಆಲಿಯಾಸ್ ಪರಮಾನಂದ ಜೈನ್ ನನ್ನು ಬಂದಿಸಿದ್ದರು.
ಕೋಲ್ಕತ್ತಾ ನ್ಯಾಯಾಲಯ ಶನಿವಾರ ಆತನನ್ನು ಜುಲೈ 19ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಇನ್ನೊಂದು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕೌನ್ಸೆಲಿಂಗ್ ಸೆಷನ್ ಗಾಗಿ ಆರೋಪಿಯ ಹಾಸ್ಟೆಲ್ ಗೆ ಶುಕ್ರವಾರ ರಾತ್ರಿ ಭೇಟಿ ನೀಡಿದ ಸಂದರ್ಭ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.