×
Ad

ಅಕ್ರಮ ಆಸ್ತಿ ಗಳಿಕೆ ಪ್ರಕರಣ : ತಮಿಳುನಾಡು ಸಚಿವ ಪೊನ್ಮುಡಿ, ಪತ್ನಿ ದೋಷಿ

Update: 2023-12-19 21:10 IST

ಕೆ. ಪೊನ್ಮುಡಿ \ Photo: PTI  

ಚೆನ್ನೈ: ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಸಚಿವ ಕೆ. ಪೊನ್ಮುಡಿ ಹಾಗೂ ಅವರ ಪತ್ನಿ ಪಿ. ವಿಸಾಲಾಚಿ ಅವರನ್ನು ಮದ್ರಾಸ್ ಹೈಕೋರ್ಟ್‌ ಮಂಗಳವಾರ ದೋಷಿ ಎಂದು ಪರಿಗಣಿಸಿದೆ.

ಇಬ್ಬರು ತಪ್ಪೆಸಗಿದ್ದಾರೆ ಎಂದು ನ್ಯಾಯಮೂರ್ತಿ ಜಿ. ಜಯಚಂದ್ರನ್ ಪರಿಗಣಿಸಿದ್ದಾರೆ ಹಾಗೂ ಶಿಕ್ಷೆಯ ಘೋಷಣೆಗಾಗಿ ಗುರುವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರು ಸೂಚಿಸಿದ್ದಾರೆ.

1996ರಿಂದ 2001ರ ವರೆಗಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರಕಾರದಲ್ಲಿ ಪೊನ್ಮುಡಿ ಅವರು ರಾಜ್ಯ ಸಾರಿಗೆ ಸಚಿವರಾಗಿದ್ದ ಸಂದರ್ಭ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಡಿಎಂಕೆಯ ಬದ್ಧ ವೈರಿ ಎಐಎಡಿಎಂಕೆ 2002ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಾಗೃತ ಹಾಗೂ ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ (ಡಿವಿಎಸಿ)ಅವರ ವಿರುದ್ದ ಪ್ರಕರಣ ದಾಖಲಿಸಿತ್ತು.

2014ರಲ್ಲಿ ಸುಪ್ರೀಂ ಕೋರ್ಟ್ ಪೊನ್ಮುಡಿ ಅವರ ವಿರುದ್ಧದ ಸಾಕ್ಷ್ಯಗಳನ್ನು ಸರಿಯಾಗಿ ಪರಿಶೀಲನೆ ನಡೆಸಿಲ್ಲ ಎಂದು ಹೇಳುವ ಮೂಲಕ ಅವರ ದೋಷಮುಕ್ತಿಯನ್ನು ರದ್ದುಗೊಳಿಸಿತ್ತು. ಅನಂತರ 2015ರಲ್ಲಿ ಪೊನ್ಮುಡಿ ವಿರುದ್ಧ ಆರೋಪ ರೂಪಿಸಲಾಗಿತ್ತು. ವಿಚಾರಣೆಯನ್ನು ವಿಲ್ಲುಪುರಂನಿಂದ ವೆಲ್ಲೂರಿಗೆ ಸ್ಥಳಾಂತರಿಸಲಾಯಿತು. ಅನಂತರ ಅವರು ಹಾಗೂ ಅವರ ಪತ್ನಿಯನ್ನು ಖುಲಾಸೆಗೊಳಿಸಲಾಯಿತು.

ಸಚಿವರು ಸೇರಿದಂತೆ ಆರು ಮಂದಿ ರಾಜಕಾರಣಿಗಳ ಖುಲಾಸೆಯನ್ನು ಸ್ವಯಂ ಪ್ರೇರಿತ ಮರು ಪರಿಶೀಲನೆಗೆ ಕೈಗೆತ್ತಿಕೊಂಡ ಬಳಿಕ ಮದ್ರಾಸ್ ಹೈಕೋರ್ಟ್‌ ನ ನ್ಯಾಯಾಧೀಶರು ಪೊನ್ಮುಡಿ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 10ರಂದು ಮರು ಆರಂಭಿಸಿದರು.

ಈ ಪ್ರಕರಣವನ್ನು ನ್ಯಾಯಮೂರ್ತಿ ವೆಂಕಟೇಶ್ ಕೈಗೆತ್ತಿಕೊಳ್ಳುವುದರ ವಿರುದ್ದ ದಂಪತಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ‘‘ನಮ್ಮ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರಂತಹ ನ್ಯಾಯಮೂರ್ತಿಯನ್ನು ಹೊಂದಿದ್ದೇವೆ. ದೇವರಿಗೆ ಧನ್ಯವಾದಗಳು’’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ನವೆಂಬರ್ ನಲ್ಲಿ ಹೇಳಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News