ಐದು ವರ್ಷಗಳಲ್ಲಿ ಕೇವಲ 24 ಪ್ರಕರಣಗಳಲ್ಲಿ ತನಿಖೆಗೆ ಆದೇಶಿಸಿದ ಲೋಕಪಾಲ; ಆರು ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಅನುಮತಿ
ಹೊಸದಿಲ್ಲಿ: ಲೋಕಪಾಲ ಕಾಯ್ದೆಯು ಅಂಗೀಕಾರಗೊಂಡು 12 ವರ್ಷಗಳ ಮತ್ತು ದೇಶದ ಮೊದಲ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ ಕಾರ್ಯ ನಿರ್ವಹಿಸಲು ಆರಂಭಿಸಿದ ಐದು ವರ್ಷಗಳ ಬಳಿಕ ಅದು ಕೇವಲ 24 ಪ್ರಕರಣಗಳಲ್ಲಿ ತನಿಖೆಗೆ ಆದೇಶಿಸಿದೆ ಮತ್ತು ಆರು ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಅನುಮತಿಯನ್ನು ನೀಡಿದೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ ಎಂದು thehindu.com ವರದಿ ಮಾಡಿದೆ.
ಸರಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ವಿರುದ್ಧ ದೂರುಗಳ ತನಿಖೆ ನಡೆಸುವ ಅಧಿಕಾರವನ್ನು ಹೊಂದಿರುವ ಲೋಕಪಾಲ ಕಳೆದ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮೂರು ದೂರುಗಳನ್ನು ಸ್ವೀಕರಿಸಿತ್ತು.
ಲೋಕಪಾಲ ಕಳೆದ ಐದು ವರ್ಷಗಳಲ್ಲಿ ಸುಮಾರು ಶೇ.90ರಷ್ಟು ದೂರುಗಳನ್ನು ಅವುಗಳನ್ನು ಸರಿಯಾದ ಸ್ವರೂಪದಲ್ಲಿ ಸಲ್ಲಿಸಿಲ್ಲ ಎಂಬ ಕಾರಣದಲ್ಲಿ ತಿರಸ್ಕರಿಸಿದೆ. ಇದೇ ಅವಧಿಯಲ್ಲಿ ಯಾವುದೇ ಲೋಪವಿಲ್ಲದ ಕನಿಷ್ಠ 2,320 ದೂರುಗಳು ಲೋಕಪಾಲದಲ್ಲಿ ದಾಖಲಾಗಿದ್ದು, ಈ ಪೈಕಿ 226 ದೂರುಗಳು 2024 ಎಪ್ರಿಲ್ ಮತ್ತು ಡಿಸೆಂಬರ್ ನಡುವೆ ದಾಖಲಾಗಿವೆ.
ಒಟ್ಟು ದೂರುಗಳ ಶೇ.3ರಷ್ಟು ಪ್ರಧಾನಿ/ಸಂಸದರು/ಕೇಂದ್ರಸಚಿವರ ವಿರುದ್ಧ ದಾಖಲಾಗಿದ್ದರೆ,ಶೇ.21ರಷ್ಟು ದೂರುಗಳು ಕೇಂದ್ರ ಸರಕಾರದ ಎ,ಬಿ,ಸಿ ಅಥವಾ ಡಿ ಗುಂಪಿನ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗಿವೆ. ಕೇಂದ್ರ ಸರಕಾರದ ಸಂಸ್ಥೆಗಳ ಅಧ್ಯಕ್ಷರು ಅಥವಾ ಸದಸ್ಯರ ವಿರುದ್ಧ ಶೇ.35ರಷ್ಟು ಮತ್ತು ರಾಜ್ಯ ಸರಕಾರಗಳ ಅಧಿಕಾರಿಗಳು ಸೇರಿದಂತೆ ‘ಇತರರು’ ವರ್ಗದ ವಿರುದ್ಧ ಶೇ.41ರಷ್ಟು ದೂರುಗಳು ದಾಖಲಾಗಿವೆ.
ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ,2013ರ ಕಲಂ 53ರ ಪ್ರಕಾರ ಆರೋಪಿತ ಅಪರಾಧ ನಡೆದ ದಿನಾಂಕದಿಂದ ಏಳು ವರ್ಷಗಳಲ್ಲಿ ದೂರನ್ನು ಸಲ್ಲಿಸಿದರೆ ಮಾತ್ರ ಅದನ್ನು ಪರಿಗಣಿಸಬಹುದು.
ವಿಳಂಬಿತ ನೇಮಕಾತಿ
ಲೋಕಪಾಲ ಕಾಯ್ದೆಯು 2013ರಲ್ಲಿಯೇ ಅಂಗೀಕಾರಗೊಂಡಿತ್ತಾದರೂ ದೇಶದ ಮೊದಲ ಲೋಕಪಾಲ ನ್ಯಾ.ಪಿನಾಕಿ ಚಂದ್ರ ಘೋಷ ಮತ್ತು ಎಂಟು ಸದಸ್ಯರು 2019,ಮಾ.19ರಂದು ನೇಮಕಗೊಂಡಿದ್ದರು. ನ್ಯಾ.ಘೋಷ ಅವರು 70 ವರ್ಷ ವಯಸ್ಸಾದ ಬಳಿಕ ಮೇ 2022ರಲ್ಲಿ ಹುದ್ದೆಯಿಂದ ನಿವೃತ್ತರಾಗಿದ್ದರು. 2024 ಮಾರ್ಚ್‌ನಲ್ಲಿ ನ್ಯಾ(ನಿವೃತ್ತ).ಎ.ಎಂ.ಖನ್ವಿಲ್ಕರ್ ಅವರು ಎರಡನೇ ಲೋಕಪಾಲರಾಗಿ ನೇಮಕಗೊಂಡಿದ್ದರು.
ವಿಚಾರಣಾ ನಿರ್ದೇಶಕ ಮತ್ತು ಪ್ರಾಸಿಕ್ಯೂಷನ್ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲು ಹಲವಾರು ಸಂದರ್ಭಗಳಲ್ಲಿ ಕೇಂದ್ರ ಸರಕಾರಕ್ಕೆ ಕಳುಹಿಸಿರುವ ಪ್ರಸ್ತಾವಗಳ ನಿರ್ಧಾರಕ್ಕಾಗಿ ಲೋಕಪಾಲ ಕಾಯುತ್ತಿದೆ. ಈ ನಡುವೆ ಪ್ರಾಥಮಿಕ ವಿಚಾರಣೆಗಳು ಮತ್ತು ತನಿಖೆಗಳನ್ನು ಕೇಂದ್ರ ಜಾಗ್ರತ ಆಯೋಗ(ಸಿವಿಸಿ) ಮತ್ತು ಸಿಬಿಐಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.