ರಾಹುಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅನಿಸಿಕೆ; ಪ್ರಿಯಾಂಕಾ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ: ಬಿಜೆಪಿ
ಪ್ರಿಯಾಂಕಾಗಾಂಧಿ | PC : PTI
ಹೊಸದಿಲ್ಲಿ,ಆ.6: ರಾಹುಲ್ ಗಾಂಧಿಯವರ ಹೇಳಿಕೆಗಾಗಿ ಸುಪ್ರೀಂಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ಟೀಕಿಸಿದ ಪ್ರಿಯಾಂಕಾಗಾಂಧಿ ವಿರುದ್ಧ ತಾನು ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸುವುದಾಗಿ ಬಿಜೆಪಿ ಬುಧವಾರ ತಿಳಿಸಿದೆ.
ಸುಪ್ರೀಂಕೋರ್ಟ್ ಬಗ್ಗೆ ಪ್ರಿಯಾಂಕಾ ಗಾಂಧಿ ವ್ಯಕ್ತಪಡಿಸಿದ ಅಭಿಪ್ರಾಯಗಳು ನ್ಯಾಯಾಂಗ ನಿಂದನೆಯಾಗಿದೆಯೆಂದು ಬಿಜೆಪಿ ಸಂಸದ ಹಾಗೂ ಹಿರಿಯ ನ್ಯಾಯವಾದಿ ಮನನ್ ಕುಮಾರ್ ಮಲ್ಹೋತ್ರಾ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಏನು ಹೇಳಬಯಸಿತ್ತೆಂಬುದನ್ನು ತಿಳಿಯದೆ ಪ್ರಿಯಾಂಕಾ ಅವರು ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿದ್ದಾರೆ. ಅವರ ವಿರುದ್ಧ ನ್ಯಾಯವಾದಿಗಳ ಸಂಘ ಹಾಗೂ ನ್ಯಾಯವಾದಿಗಳು ಅರ್ಜಿಯನ್ನು ಸಲ್ಲಿಸಿದೆ. ಈ ದೇಶದ ಸಾರ್ವಜನಿಕರು ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಎಂದಿಗೂ ಸಹಿಸಲಾರರು ಎಂದರು.
ಭಾರತ-ಚೀನಾ ಗಡಿ ವಿವಾದದ ಕುರಿತಾಗಿ ಭಾರತೀಯ ಸೇನೆಯ ಬಗ್ಗೆ ರಾಹುಲ್‌ಗಾಂಧಿ ನೀಡಿದ ಹೇಳಿಕೆಗಾಗಿ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ತನ್ನ ಸಹೋದರ ರಾಹುಲ್ ಅವರ ಈ ಹೇಳಿಕೆಯನ್ನು ಪ್ರಿಯಾಂಕಾ ಸಮರ್ಥಿಸಿಕೊಂಡಿದ್ದರು ‘‘ ನಿಜವಾದ ಭಾರತೀಯ ಯಾರೆಂಬುದನ್ನು ಅವರು ನಿರ್ಧರಿಸಲಾರರು. ಸರಕಾರವನ್ನು ಪ್ರಶ್ನಿಸುವುದು ಪ್ರತಿಪಕ್ಷ ನಾಯಕನ ಕರ್ತವ್ಯವಾಗಿದೆ. ನನ್ನ ಸಹೋದರನು ಭಾರತೀಯ ಸೇನೆಗೆ ವಿರುದ್ಧವಾದ ಯಾವುದೇ ಮಾತನ್ನೂ ಆಡಿಲ್ಲ. ಆತ ಸೇನೆಯ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ’’ ಎಂದು ಪ್ರಿಯಾಂಕಾ ಹೇಳಿದ್ದರು.
ಅರುಣಾಚಲ ಪ್ರದೇಶದ ಪ್ರಾಂತದಲ್ಲಿ ಭಾರತಕ್ಕೆ ಸೇರಿದ 2 ಸಾವಿರ ಚ.ಕಿ.ಮೀ. ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದೆಯೆಂಬ ಹೇಳಿಕೆಯನ್ನು ನೀಡಿದ್ದಕ್ಕಾಗಿ ಅವರನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ ಅವರನ್ನೊಳಗೊಂಡ ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿತ್ತು.ಚೀನಾವು ಭಾರತದ 2 ಸಾವಿರ ಚ.ಕಿ.ಮೀ. ಪ್ರದೇಶವನ್ನು ಅತಿಕ್ರಮಿಸಿದೆಯೆಂದು ರಾಹುಲ್‌ಗೆ ಹೇಗೆ ಗೊತ್ತು?. ನಿಜವಾದ ಭಾರತೀಯ ಹೀಗೆ ಹೇಳಲಾರ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.