×
Ad

ಸಾಕು ಪ್ರಾಣಿಗಳನ್ನು ಗಿರ್ ಸಿಂಹಗಳು ಹತ್ಯೆಗೈಯ್ಯುವ ಪ್ರಕರಣಗಳಲ್ಲಿ ಹೆಚ್ಚಳ: ಸರಕಾರಿ ದತ್ತಾಂಶ

Update: 2025-02-06 21:38 IST

PC - deccanherald

ಹೊಸದಿಲ್ಲಿ: ಇತ್ತೀಚಿನ ಸರಕಾರಿ ದತ್ತಾಂಶದ ಪ್ರಕಾರ, ಗುಜರಾತ್ ನ ಗಿರ್ ಅರಣ್ಯದಲ್ಲಿನ ಸಾಕು ಪ್ರಾಣಿಗಳನ್ನು ಸಿಂಹಗಳು ಹತ್ಯೆಗೈಯ್ಯುವ ಘಟನೆಗಳು ಸ್ಥಿರವಾಗಿ ಏರಿಕೆಯಾಗುತ್ತಿದ್ದು, 2023-24ರಲ್ಲಿ ಅತ್ಯಧಿಕ 4,385ಕ್ಕೆ ತಲುಪಿದೆ ಎನ್ನಲಾಗಿದೆ.

ಏಶ್ಯಾ ಮೂಲದ ಸಿಂಹಗಳಿಗೆ ಏಕೈಕ ನೈಸರ್ಗಿಕ ಆವಾಸ ಸ್ಥಾನವಾದ ಗುಜರಾತ್ ನ ಗಿರ್ ಅರಣ್ಯದಲ್ಲಿ ಬೇಟೆಗೀಡಾಗುವ ಪ್ರಾಣಿಗಳ ಸಂಖ್ಯೆ ಕಳೆದ ಆರು ವರ್ಷಗಳಲ್ಲಿ ಅಧಿಕವಾಗಿದ್ದರೂ ಈ ಪ್ರವೃತ್ತಿ ಕಂಡು ಬಂದಿದೆ.

ಗುಜರಾತ್ ಸರಕಾರದ ದತ್ತಾಂಶಗಳನ್ನು ಉಲ್ಲೇಖಿಸಿದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಸಿಂಹಗಳು ಸಾಕು ಪ್ರಾಣಿಗಳನ್ನು ಕೊಲ್ಲುವ ಘಟನೆಗಳ ಸಂಖ್ಯೆ 2019-20ನೇ ಸಾಲಿನಲ್ಲಿ 2,605 ಇದ್ದದ್ದು, 2020-21ನೇ ಸಾಲಿನಲ್ಲಿ 3,244ಕ್ಕೆ ಏರಿಕೆಯಾಗಿದೆ. 2021-22ನೇ ಸಾಲಿನಲ್ಲಿ 3,659 ಇದ್ದದ್ದು 2022-23ನೇ ಸಾಲಿನಲ್ಲಿ 3,670ಕ್ಕೆ ಏರಿಕೆಯಾಗಿದ್ದರೆ, 2023-24ನೇ ಸಾಲಿನಲ್ಲಿ 4,385ಕ್ಕೆ ಏರಿಕೆಯಾಗಿದೆ ಎಂದು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.

ಗಿರ್ ಅರಣ್ಯದಲ್ಲಿ ಸಿಂಹಗಳಿಗೆ ಬೇಟೆಗೀಡಾಗುವ ಪ್ರಾಣಿಗಳ ಸಂಖ್ಯೆ ಸಾಕಷ್ಟಿದ್ದು, ಅವುಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಅವರು ತಿಳಿಸಿದರು.

2019-20ನೇ ಸಾಲಿನಲ್ಲಿ 1,55,659ರಷ್ಟಿದ್ದ ಬೇಟೆಗೀಡಾಗುವ ಪ್ರಾಣಿಗಳ ಸಂಖ್ಯೆ 2022ರಲ್ಲಿ 2,02,993ಗೆ ಏರಿಕೆಯಾಗಿದ್ದು, 2024ರಲ್ಲಿ ಈ ಸಂಖ್ಯೆ 2,13,391ಕ್ಕೆ ಏರಿಕೆಯಾಗಿದೆ ಎಂಬ ಸಂಗತಿ ದತ್ತಾಂಶಗಳಿಂದ ವ್ಯಕ್ತವಾಗಿದೆ.

ಜೂನ್ 2020ರಲ್ಲಿನ ತೀರಾ ಇತ್ತೀಚಿನ ಅಂದಾಜಿನ ಪ್ರಕಾರ, 2015ರಲ್ಲಿ 523ರಷ್ಟಿದ್ದ ಗುಜರಾತ್ ನಲ್ಲಿನ ಏಶ್ಯಾ ಮೂಲದ ಸಿಂಹಗಳ ಸಂಖ್ಯೆ 674ಕ್ಕೆ ಏರಿಕೆಯಾಗಿದೆ.

2015ರಲ್ಲಿ 22,000 ಚದರ ಕಿಮೀಯಷ್ಟಿದ್ದ ಸಿಂಹಗಳ ವಿಂಗಡಣೆ ಪ್ರದೇಶದ ವ್ಯಾಪ್ತಿಯು, 2020ರಲ್ಲಿ 30,000 ಚದರ ಕಿಮೀ ವ್ಯಾಪ್ತಿಗೆ ಏರಿಕೆಯಾಗಿರುವುದು ಗುಜರಾತ್ ನ ಮುಖ್ಯ ವನ್ಯಜೀವಿ ಮೇಲ್ವಿಚಾರಕ ಕಚೇರಿಯ ದಾಖಲೆಯೊಂದರಿಂದ ವ್ಯಕ್ತವಾಗಿದೆ.

Nature ವಾರ್ತಾಪತ್ರದಲ್ಲಿ 2022ರಲ್ಲಿ ಪ್ರಕಟವಾಗಿರುವ ವೈಜ್ಞಾನಿಕ ವರದಿಯ ಪ್ರಕಾರ, ಹಾಲಿ ಸಿಂಹಗಳ ಪ್ರಮಾಣದ ಶೇ. 48ರಷ್ಟು ಸಿಂಹಗಳು ಸಂರಕ್ಷಿತ ಪ್ರದೇಶಗಳ ಹೊರಗೆ ಚದುರಿ ಹೋಗಿದ್ದು, 9 ಜಿಲ್ಲೆಗಳು ಹಾಗೂ 13 ಅರಣ್ಯ ಆಡಳಿತಾತ್ಮಕ ವಲಯಗಳಲ್ಲಿ ಹರಡಿಕೊಂಡಿವೆ.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ
https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News