×
Ad

ಭಾರತ ಸೇರಿದಂತೆ ಜಾಗತಿಕವಾಗಿ 8 ದೇಶಗಳಲ್ಲಿ ಅರ್ಧದಷ್ಟು ಮಕ್ಕಳಿಗೆ ಲಸಿಕೆ ಸಿಗಲ್ಲ!

Update: 2025-06-25 21:43 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: 2023ರವರೆಗಿನ ಅಂಕಿ ಅಂಶಗಳಂತೆ, ಜಗತ್ತಿನಾದ್ಯಂತ ಲಸಿಕೆ ಪಡೆಯದ ಮಕ್ಕಳ ಅರ್ಧದಷ್ಟು ಭಾಗ ಭಾರತ ಸೇರಿದಂತೆ 8 ದೇಶಗಳಲ್ಲಿದ್ದಾರೆ ಎಂಬುದಾಗಿ ‘ದ ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯೊಂದು ಹೇಳಿದೆ.

ಅದೇ ವರ್ಷ, ತಮ್ಮ ಮೊದಲನೇ ವರ್ಷದಲ್ಲಿ ಡಿಫ್ತೀರಿಯ, ಧನುರ್ವಾಯು ಮತ್ತು ನಾಯಿ ಕೆಮ್ಮು ರೋಗಗಳಿಗೆ ಲಸಿಕೆಗಳನ್ನು ಪಡೆಯದ 1.57 ಕೋಟಿ ಮಕ್ಕಳು ಜಗತ್ತಿನಲ್ಲಿದ್ದರು. ಈ ಪೈಕಿ 14.4 ಲಕ್ಷ ಮಕ್ಕಳು ಭಾರತದಲ್ಲಿದ್ದರು ಎನ್ನುವುದನ್ನು ಅಧ್ಯಯನ ಕಂಡುಕೊಂಡಿದೆ.

‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ 2023 ವ್ಯಾಕ್ಸಿನ್ ಕವರೇಜ್ ಕೊಲಾಬೊರೇಟರ್ಸ್’ ಎಂಬ ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು, 1980ರಿಂದ 2023ರವರೆಗೆ 204 ದೇಶಗಳು ಮತ್ತು ಭೂಭಾಗಗಳಲ್ಲಿ ಮಕ್ಕಳಿಗೆ ನೀಡಲಾಗಿರುವ ಲಸಿಕೆಗಳಿಗೆ ಸಂಬಂಧಿಸಿದ ಅಂಕಿಅಂಶಗಳ ವಿಶ್ಲೇಷಣೆ ಮಾಡಿದ್ದಾರೆ.

1980ರಲ್ಲಿ, ಜಗತ್ತಿನಾದ್ಯಂತ ಬಾಲ್ಯಕಾಲದ ನಿಯಮಿತ ಲಸಿಕೆಗಳನ್ನು ಪಡೆಯದ ಮಕ್ಕಳ ಪೈಕಿ 53.5 ಶೇಕಡ ಕೇವಲ ಐದು ದೇಶಗಳಲ್ಲಿದ್ದರು - ಭಾರತ, ಚೀನಾ, ಇಂಡೋನೇಶ್ಯ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎಂದು ಈ ತಂಡದ ವರದಿ ಹೇಳಿದೆ.

‘‘ಕಳೆದ 50 ವರ್ಷಗಳಲ್ಲಿ ಅಸಾಧಾರಣ ಪ್ರಯತ್ನಗಳನ್ನು ಮಾಡಲಾಗಿದೆಯಾದರೂ, ಪ್ರಗತಿಯು ಜಾಗತಿಕ ಮಟ್ಟದಲ್ಲಿ ಒಂದೇ ಸಮನಾಗಿಲ್ಲ. ಅಗಾದ ಸಂಖ್ಯೆಯ ಮಕ್ಕಳು ಈಗಲೂ ಲಸಿಕೆಗಳಿಂದ ವಂಚಿತರಾಗಿಯೇ ಮುಂದುವರಿದಿದ್ದಾರೆ’’ ಎಂದು ವರದಿಯ ಹಿರಿಯ ಲೇಖಕ, ವಾಶಿಂಗ್ಟನ್ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವೇಲ್ಯುವೇಶನ್‌ನ ಡಾ. ಜೊನಾತನ್ ಮೋಸರ್ ಹೇಳುತ್ತಾರೆ.

‘‘2023ರ ಮಟ್ಟಿಗೆ ಹೇಳುವುದಾದರೆ, ಜಾಗತಿಕ ಮಟ್ಟದಲ್ಲಿ 1.57 ಕೋಟಿ ಮಕ್ಕಳಿಗೆ ನಿಯಮಿತ ಲಸಿಕೆ ಸಿಕ್ಕಿಲ್ಲ. ಈ ಪೈಕಿ 50 ಶೇಕಡಕ್ಕೂ ಅಧಿಕ ಮಕ್ಕಳು ಕೇವಲ ಎಂಟು ದೇಶಗಳಲ್ಲಿ- ನೈಜೀರಿಯ, ಭಾರತ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಇಥಿಯೋಪಿಯ, ಸೊಮಾಲಿಯ, ಸುಡಾನ್, ಇಂಡೋನೇಶ್ಯ ಮತ್ತು ಬ್ರೆಝಿಲ್ - ವಾಸಿಸುತ್ತಿದ್ದಾರೆ. ಇದು ಹಾಸುಹೊಕ್ಕಾಗಿರುವ ಅವ್ಯವಸ್ಥೆಯನ್ನು ಸೂಸಿಸುತ್ತದೆ’’ ಎಂಬುದಾಗಿ ವರದಿ ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News