ʼಆದಾಯ ತೆರಿಗೆ ಮಸೂದೆ- 2025ʼ ಹಿಂಪಡೆದ ಕೇಂದ್ರ ಸರಕಾರ : ಮಸೂದೆಯ ಹೊಸ ಆವೃತಿ ಸೋಮವಾರ ಮಂಡನೆ
Update: 2025-08-08 16:48 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (File Photo: PTI)
ಹೊಸದಿಲ್ಲಿ : ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಲು ಫೆಬ್ರವರಿ 13ರಂದು ಲೋಕಸಭೆಯಲ್ಲಿ ಪರಿಚಯಿಸಲಾಗಿದ್ದ ಆದಾಯ ತೆರಿಗೆ ಮಸೂದೆ- 2025 ಅನ್ನು ಕೇಂದ್ರ ಸರಕಾರ ಶುಕ್ರವಾರ ಹಿಂಪಡೆದುಕೊಂಡಿದೆ.
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಅಧ್ಯಕ್ಷತೆಯ ಸಮಿತಿಯು ಮಾಡಿದ ಶಿಫಾರಸುಗಳನ್ನು ಒಳಗೊಂಡಿರುವ ನವೀಕರಿಸಲಾದ ಮಸೂದೆಯ ಹೊಸ ಆವೃತ್ತಿಯನ್ನು ಆಗಸ್ಟ್ 11ರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲಾದ ಹಿಂದಿನ ಕರಡು, ನೇರ ತೆರಿಗೆ ಕಾನೂನುಗಳನ್ನು ಆಧುನೀಕರಿಸುವ ಮತ್ತು ಸರಳಗೊಳಿಸುವ ಸರಕಾರದ ವಿಶಾಲ ಯೋಜನೆಯ ಭಾಗವಾಗಿತ್ತು. ಪರಿಷ್ಕೃತ ಮಸೂದೆಯು ಮೂಲ ರಚನೆಯನ್ನು ಸಂರಕ್ಷಿಸುವ ನಿರೀಕ್ಷೆಯಿದೆ. ಸಂಸದೀಯ ಸಮಿತಿಯು ಶಿಫಾರಸು ಮಾಡಿದ ಹಲವಾರು ಮಾರ್ಪಾಡುಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.