×
Ad

ಅಧಿಕ ಸುಂಕ ಪಟ್ಟಿಗೆ ಸೇರಿಸಿದ ಅಮೆರಿಕದ ಕ್ರಮದಿಂದ ಹೆಚ್ಚು ತೊಂದರೆ ಎದುರಿಸುವ ದೇಶಗಳ ಸಾಲಿನಲ್ಲಿ ಭಾರತ

Update: 2025-08-01 21:37 IST

ಸಾಂದರ್ಭಿಕ ಚಿತ್ರ | PC : X  

ಹೊಸದಿಲ್ಲಿ,ಆ.1: ಅಮೆರಿಕ ಸರಕಾರವು ಹೊಸದಾಗಿ ಪರಿಷ್ಕರಿಸಿರುವ ಸುಂಕಗಳಿಂದಾಗಿ ಭಾರತವು ಶೇ.25 ಅಥವಾ ಅದಕ್ಕೂ ಹೆಚ್ಚಿನ ಸುಂಕ ಏರಿಕೆಯನ್ನು ಎದುರಿಸುತ್ತಿರುವ ದೇಶಗಳಲ್ಲಿ ಸೇರಿದೆ. ಸಿರಿಯಾ,ಲಾವೋಸ್ ಮತ್ತು ಇರಾಕ್‌ನಂತಹ ಸಣ್ಣ ಅಥವಾ ಭೌಗೋಳಿಕವಾಗಿ ಪ್ರತ್ಯೇಕಿತ ದೇಶಗಳು ಈ ಪಟ್ಟಿಯಲ್ಲಿರುವ ಇತರ ಆರ್ಥಿಕತೆಗಳಾಗಿವೆ.

ಜವಳಿ ಮತ್ತು ಚರ್ಮದಂತಹ ಹೆಚ್ಚು ಕಾರ್ಮಿಕರು ಅಗತ್ಯವಿರುವ ಕ್ಷೇತ್ರಗಳಲ್ಲಿಯ ಉತ್ಪನ್ನಗಳ ರಫ್ತಿನಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗಿರುವ ಹೆಚ್ಚಿನ ಆಸಿಯಾನ್ ಮತ್ತು ದಕ್ಷಿಣ ಏಶ್ಯಾ ದೇಶಗಳು ತೀವ್ರ ಸುಂಕ ಏರಿಕೆಯಿಂದ ಪಾರಾಗಿರುವುದು ಭಾರತಕ್ಕೆ ವಿಶೇಷ ಕಳವಳಕಾರಿ ವಿಷಯವಾಗಿದೆ. ವಿಯೆಟ್ನಾಂ, ಬಾಂಗ್ಲಾದೇಶ, ಮಲೇಶ್ಯಾ, ಇಂಡೋನೇಶ್ಯಾ ಮತ್ತು ಕಾಂಬೋಡಿಯಾ ಈಗ ಶೇ.19-20 ಸುಂಕ ಶ್ರೇಣಿಯಲ್ಲಿವೆ.

ಚೀನಾವನ್ನು ಇತ್ತೀಚಿನ ಸುಂಕ ಪಟ್ಟಿಯಿಂದ ಹೊರಗಿರಿಸಲಾಗಿದ್ದರೂ ಮೇ 12,2025ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರಡಿಸಿದ ಕಾರ್ಯ ನಿರ್ವಾಹಕ ಆದೇಶವು ಚೀನಿ ಉತ್ಪನ್ನಗಳ ಮೇಲೆ ಈಗಾಗಲೇ ಶೇ.34ರಷ್ಟು ಸುಂಕ ಹೆಚ್ಚಳವನ್ನು ಕಡ್ಡಾಯಗೊಳಿಸಿದೆ.

ಇದರರ್ಥ ಭಾರತವು ತಾಂತ್ರಿಕವಾಗಿ ಈಗಲೂ ಚೀನಾಕ್ಕಿಂತ ಕಡಿಮೆ ಸುಂಕವನ್ನು ಹೊತ್ತಿದೆ. ಅಂತರವು ಕಡಿಮೆಯಾಗಿದ್ದು, ಕಡಿಮೆ ವೆಚ್ಚದಲ್ಲಿ ಉತ್ಪಾದನೆಗೆ ಚೀನಾ ಹೆಸರಾಗಿರುವುದನ್ನು ಪರಿಗಣಿಸಿದರೆ ಅದು ಈ ಅಲ್ಪ ಅಂತರವನ್ನು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಮತ್ತು ಬೆಲೆ ದಕ್ಷತೆಯಿಂದ ಸುಲಭವಾಗಿ ಸರಿದೂಗಿಸಬಹುದು.

2024ರಲ್ಲಿ ಏಶ್ಯಾದಲ್ಲಿ ಅಮೆರಿಕದೊಂದಿಗೆ 113 ಶತಕೋಟಿ ಡಾ.ಗಳ ವ್ಯಾಪಾರ ಕೊರತೆಯನ್ನು ಹೊಂದುವ ಮೂಲಕ ಏಶ್ಯಾದಲ್ಲಿ ಚೀನಾದ ನಂತರ ಎರಡನೇ ಸ್ಥಾನದಲ್ಲಿದ್ದ ವಿಯೆಟ್ನಾಂ ಶೇ.20ರ ಸುಂಕದ ಗುಂಪಿನಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಅನೇಕ ವ್ಯಾಪಾರ ತಜ್ಞರನ್ನು ಗೊಂದಲಕ್ಕೀಡು ಮಾಡಿದೆ. ಆದಾಗ್ಯೂ ವಿಯೆಟ್ನಾಮ್‌ ನಂತಹ ಮೂರನೇ ದೇಶಗಳ ಮೂಲಕ ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡಿದರೆ ಶೇ.40ರಷ್ಟು ಸುಂಕವನ್ನು ವಿಧಿಸಲಾಗುತ್ತದೆ ಎಂದು ಟ್ರಂಪ್ ಆದೇಶವು ಸ್ಪಷ್ಟಪಡಿಸಿದೆ.

ಜವಳಿ ರಫ್ತು ಮಾರುಕಟ್ಟೆಯಲ್ಲಿ ಭಾರತದ ನೇರ ಪ್ರತಿಸ್ಪರ್ಧಿಯಾಗಿರುವ ಬಾಂಗ್ಲಾದೇಶವೂ ಶೇ.20ರ ಸುಂಕದ ಗುಂಪಿನಲ್ಲಿದೆ. ಹೆಚ್ಚಿನ ರಫ್ತು ಕೇತ್ರಗಳಲ್ಲಿ ಭಾರತಕ್ಕೆ ಗಮನಾರ್ಹ ಪ್ರತಿಸ್ಪರ್ಧಿಯಲ್ಲದ ಪಾಕಿಸ್ತಾನವು ಶೇ.19ರ ಸುಂಕ ಗುಂಪಿನಲ್ಲಿದ್ದು, ಇದನ್ನು ಅದಕ್ಕೆ ವಾಣಿಜ್ಯ ಬೆದರಿಕೆಗಿಂತ ಹೆಚ್ಚಾಗಿ ಅದರ ರಾಜತಾಂತ್ರಿಕ ವಿಜಯವನ್ನಾಗಿ ನೋಡಲಾಗುತ್ತಿದೆ.

ರಶ್ಯಾದೊಂದಿಗೆ ತೈಲ ಮತ್ತು ರಕ್ಷಣಾ ವ್ಯವಹಾರಗಳಿಗಾಗಿ ಶೆ.25ರಷ್ಟು ಸುಂಕ ಹೆಚ್ಚಳ ಮತ್ತು ಅನಿರ್ದಿಷ್ಟ ದಂಡದೊಂದಿಗೆ ಭಾರತವು ಈಗ ಟ್ರಂಪ್ ಸುಂಕಗಳಿಂದಾಗಿ ಹೆಚ್ಚು ಬಾಧಿತ ದೇಶಗಳಲ್ಲಿ ಒಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News