×
Ad

ಮೆಹುಲ್ ಚೋಕ್ಸಿಯನ್ನು ಗಡೀಪಾರು ಮಾಡಿದರೆ ಮುಂಬೈ ಜೈಲಿನಲ್ಲಿರಿಸಲಾಗುವುದು : ಬೆಲ್ಜಿಯಂ ಸರಕಾರಕ್ಕೆ ತಿಳಿಸಿದ ಭಾರತ

Update: 2025-09-08 13:04 IST

ಮೆಹುಲ್ ಚೋಕ್ಸಿ (Photo credit: ANI)

ಹೊಸದಿಲ್ಲಿ : ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡೀಪಾರು ಮಾಡಿದರೆ ಅವರನ್ನು ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲ್ಲಿನಲ್ಲಿರಿಸುವುದಾಗಿ ಬೆಲ್ಜಿಯಂ ಸರಕಾರಕ್ಕೆ ಭಾರತ ಪತ್ರದಲ್ಲಿ ತಿಳಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,000 ಕೋಟಿ ರೂ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಭಾರತಕ್ಕೆ ಬೇಕಾಗಿದ್ದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಿದ ನಾಲ್ಕು ತಿಂಗಳ ನಂತರ ಬೆಲ್ಜಿಯಂ ಸರಕಾರಕ್ಕೆ ಭಾರತ ಭರವಸೆ ಪತ್ರವನ್ನು ಕಳುಹಿಸಿದೆ.

ಸಿಬಿಐ ಕಳುಹಿಸಿದ ಗಡೀಪಾರು ವಿನಂತಿಯ ಆಧಾರದ ಮೇಲೆ ಎಪ್ರಿಲ್‌ನಲ್ಲಿ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು. ಕಳೆದ ತಿಂಗಳು, ಬೆಲ್ಜಿಯಂನ ಮೇಲ್ಮನವಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅವರ ಹಸ್ತಾಂತರದ ವಿಚಾರಣೆಯನ್ನು ಸೆಪ್ಟೆಂಬರ್ ಎರಡನೇ ವಾರಕ್ಕೆ ನಿಗದಿಪಡಿಸಲಾಗಿದೆ.

ಬೆಲ್ಜಿಯಂ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ, ಗೃಹ ಸಚಿವಾಲಯವು ಚೋಕ್ಸಿಯನ್ನು ಭಾರತಕ್ಕೆ ಕರೆತಂದ ನಂತರ ಎಲ್ಲಿ ಇರಿಸಲಾಗುವುದು ಎಂಬುದರ ಕುರಿತು ವಿವರಗಳನ್ನು ಹಂಚಿಕೊಂಡಿದೆ. ಉದ್ಯಮಿ ಮೆಹುಲ್ ಚೋಕ್ಸಿಯನ್ನು ಮುಂಬೈನ ಆರ್ಥರ್ ರಸ್ತೆ ಜೈಲು ಸಂಕೀರ್ಣದ ಬ್ಯಾರಕ್ ಸಂಖ್ಯೆ 12ರಲ್ಲಿ ಇರಿಸುವುದಾಗಿ ಹೇಳಿದೆ.

ಅವರ ಸೆಲ್ ದಿನದ 24 ಗಂಟೆಗಳ ಕಾಲ ಮೇಲ್ವಿಚಾರಣೆಯಲ್ಲಿರುತ್ತದೆ ಮತ್ತು ಪೀಠೋಪಕರಣಗಳನ್ನು ಹೊರತುಪಡಿಸಿ ಕನಿಷ್ಠ ಮೂರು ಚದರ ಮೀಟರ್ ವೈಯಕ್ತಿಕ ಸ್ಥಳವನ್ನು ಒದಗಿಸುತ್ತದೆ ಎಂದು ತಿಳಿಸಿದೆ. ಚೋಕ್ಸಿಗೆ ಶುದ್ಧ ಕುಡಿಯುವ ನೀರು ಮತ್ತು ದಿನದ 24 ಗಂಟೆಗಳ ಕಾಲ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುತ್ತವೆ. ಪ್ರತಿದಿನ ಒಂದು ಗಂಟೆಗೂ ಹೆಚ್ಚು ಕಾಲ ವ್ಯಾಯಾಮಕ್ಕೆ ಅವಕಾಶ ನೀಡಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ.

ಮುಂಬೈ ಜೈಲಿನಲ್ಲಿರುವ ಸೆಲ್‌ಗಳನ್ನು ಪ್ರತಿದಿನ ಸ್ವಚ್ಛಗೊಳಿಸಲಾಗುತ್ತದೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗುತ್ತಿದೆ. ದಿನಕ್ಕೆ ಮೂರು ಬಾರಿ ಸಾಕಷ್ಟು ಆಹಾರ ನೀಡಲಾಗುವುದು. ಜೈಲು ಕ್ಯಾಂಟೀನ್, ಹಣ್ಣುಗಳು ಮತ್ತು ತಿಂಡಿಗಳು ಕೂಡ ಲಭ್ಯವಿದೆ. ಜೈಲಿನಲ್ಲಿ ಯೋಗ, ಧ್ಯಾನ ಮತ್ತು ಗ್ರಂಥಾಲಯಗಳಿಗೆ ಕೂಡ ಅವಕಾಶವಿದೆ ಎಂದು ಗೃಹ ಸಚಿವಾಲಯ ಪತ್ರದಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News