ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ-ಬ್ರಿಟನ್ ಸಹಿ; ಭಾರತದಲ್ಲಿ ಅಗ್ಗವಾಗಲಿವೆ ಬ್ರಿಟಿಶ್ ನಿರ್ಮಿತ ಕಾರುಗಳು, ವೈದ್ಯಕೀಯ ಉಪಕರಣಗಳು
PC : Bloomberg
ಹೊಸದಿಲ್ಲಿ: ಭಾರತ ಹಾಗೂ ಬ್ರಿಟನ್ ಗುರುವಾರ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಸಹಿಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟಿಶ್ ಪ್ರಧಾನಿ ಕೀತ್ ಸ್ಟಾರ್ಮರ್ ಅವರ ಉಪಸ್ಥಿತಿಯಲ್ಲಿ ಸಹಿಹಾಕಲಾದ ಈ ಒಪ್ಪಂದವು ಎರಡೂ ದೇಶಗಳ ನಡುವಿನ ಆಮದು ಹಾಗೂ ರಫ್ತುಗಳ ಮೇಲಿನ ಸುಂಕವನ್ನು ರದ್ದುಪಡಿಸುವ ಅಥವಾ ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ. 2030ರೊಳಗೆ ತಮ್ಮ ನಡುವಿನ ವ್ಯಾಪಾರವನ್ನು 120 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಆಕಾಂಕ್ಷೆಯನ್ನು ಉಭಯ ದೇಶಗಳು ಹೊಂದಿವೆ.
ಸುಮಾರು ಮೂರು ವರ್ಷಗಳ ಸುದೀರ್ಘ ಮಾತುಕತೆ ಹಾಗೂ ಸಮಾಲೋಚನೆಗಳ ಬಳಿಕ ಈ ಐತಿಹಾಸಿಕ ಒಪ್ಪಂದವನ್ನು ಏರ್ಪಡಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಅಭಿವೃದ್ಧಿಹೊಂದಿದ ದೇಶದ ಜೊತೆಗೆ ಭಾರತ ಏರ್ಪಡಿಸಿಕೊಂಡತಹ ಪ್ರಪ್ರಥಮ ವ್ಯಾಪಾರ ಒಪ್ಪಂದ ಇದಾಗಲಿದೆ. ಬ್ರಿಟನ್ ಸಂಸತ್ ಹಾಗೂ ಭಾರತದ ಕೇಂದ್ರ ಸಂಪುಟದ ಅನುಮೋದನೆಯ ಬಳಿಕ ಒಪ್ಪಂದವು ಮುಂದಿನ ವರ್ಷದೊಳಗೆ ಜಾರಿಗೆ ಬರಲಿದೆ.
ಜವಳಿ, ಚರ್ಮ, ಪಾದರಕ್ಷೆ, ಕ್ರೀಡಾಸಾಮಾಗ್ರಿಗಳು, ಆಟಿಕೆಗಳು, ಸಾಗರ ಉತ್ಪನ್ನಗಳು, ರತ್ನಗಳು ಹಾಗೂ ಆಭರಣ, ಎಂಜಿನಿಯರಿಂಗ್ ಸರಕುಗಳು, ಆಟೋ ಭಾಗಗಳು ಹಾಗೂ ಎಂಜಿನ್‌ಗಳು ಮತ್ತು ಸಾವಯವ ರಾಸಾಯನಿಕಗಳು ಸೇರಿದಂತೆ ಪ್ರಮುಖ ವಲಯಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿವೆ.
ಒಪ್ಪಂದದ ಸಹಿ ಸಮಾರಂಭದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಇದೊಂದು ಐತಿಹಾಸಿಕ ದಿನವೆಂದು ಬಣ್ಣಿಸಿದರು, ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಉಭಯದೇಶಗಳು ಸಮಗ್ರ ಆರ್ಥಿಕ ಹಾಗೂ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸಿವೆ ಎಂದರು.
ಭಾರತದ ಜನರು ಹಾಗೂ ಕೈಗಾರಿಕೆಗಳಿಗೆ, ಬ್ರಿಟನ್‌ನಲ್ಲಿ ತಯಾರಾದ ವೈದ್ಯಕೀಯ ಸಲಕರಣೆಗಳು ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪನ್ನಗಳು ಯೋಗ್ಯ ದರಗಳಲ್ಲಿ ಲಭ್ಯವಾಗಲಿವೆ.ಈ ಒಪ್ಪಂದವು ಭಾರತದ ಜನತೆಗೆ ಅದರಲ್ಲೂ ನಿರ್ದಿಷ್ಟವಾಗಿ ಭಾರತದ ಯುವಜನತೆಗೆ, ರೈತರು, ಮೀನುಗಾರರು ಹಾಗೂ ಎಂಎಸ್‌ಎಂಇ (ಮಧ್ಯಮ, ಕಿರು ಹಾಗೂ ಸೂಕ್ಷ್ಮ ಉದ್ಯಮ ವಲಯಕ್ಕೆ) ಈ ಒಪ್ಪಂದವು ಪ್ರಯೋಜನಕಾರಿಯಾಗಲಿದೆಯೆಂದು ಪ್ರಧಾನಿ ತಿಳಿಸಿದರು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಕ್ಕಾಗಿ ಬ್ರಿಟಿಶ್ ಪ್ರಧಾನಿ ಕೀತ್‌ಸ್ಟಾರ್ಮರ್ ಹಾಗೂ ಅವರ ಸರಕಾರಕ್ಕೆ ಪ್ರಧಾನಿ ಪತ್ರಿಕಾಗೋಷ್ಠಿಯಲ್ಲಿ ಕೃತಜ್ಞತೆ ಅರ್ಪಿಸಿದರು.
ಭಾರತದ ಜೊತೆಗಿನ ಈ ಮಹತ್ವದ ಒಪ್ಪಂದದಿಂದಾಗಿ ಬ್ರಿಟನ್‌ನಲ್ಲಿ ಉದ್ಯೋಗಗಳು, ಹೂಡಿಕೆ ಹಾಗೂ ಆರ್ಥಿಕ ಬೆಳವಣಿಗೆಯಾಗಲಿದೆ. ಸಾವಿರಾರು ಬ್ರಿಟಿಶ್ ಉದ್ಯೋಗಗಳು ಸೃಷ್ಟಿಯಾಗಲಿವೆ, ಉದ್ಯಮ ಕ್ಷೇತ್ರಗಳಲ್ಲಿ ಹೊಸಅವಕಾಶಗಳು ತೆರೆಯಲ್ಪಡಲಿವೆ ಹಾಗೂ ದುಡಿಯುವ ವರ್ಗದ ಜನರ ಕಿಸೆಗಳಿಗೆ ಹಣವನ್ನು ತುಂಬಲಿದೆ.. ಇದು ನಮ್ಮ ಕ್ರಿಯಾ ಯೋಜನೆಯಾಗಿದೆ.
ಕೀತ್ ಸ್ಟಾರ್ಮರ್, ಬ್ರಿಟಿಶ್ ಪ್ರಧಾನಿ ಎಫ್‌ಟಿಎ: ಭಾರತ ನೀಡಿದ ರಿಯಾಯಿತಿಗಳು
►ಸ್ಕಾಚ್ ವಿಸ್ಕಿ ಹಾಗೂ ಜಿನ್‌ಗಳ ಮೇಲಿನ ಆಮದು ಸುಂಕವನ್ನು 150 ಶೇಕಡದಿಂದ ಶೇ.75ಕ್ಕೆ ಇಳಿಸಲಾಗಿದೆ ಹಾಗೂ ಮುಂದಿನ 10 ವರ್ಷಗಳಲ್ಲಿ ಅದನ್ನು ಶೇಕಡ 40ಕ್ಕೆ ಇಳಿಸಲಾಗುವುದು.
►ಕಾರುಗಳು: ಬ್ರಿಟನ್ ನಿರ್ಮಿತ ವಾಹನಗಳ ಮೇಲೆ ಪ್ರಸಕ್ತ ಇರುವ ಶೇ.100 ಆಮದು ಸುಂಕವನ್ನು ಶೇ.10ಕ್ಕೆ ಇಳಿಸಲಾಗಿದೆ.
►ಇತರ ಸರಕುಗಳು: ಪ್ರಸಾಧನಸಾಮಾಗ್ರಿಗಳು (ಕಾಸ್ಮೆಟಿಕ್ಸ್), ವೈದ್ಯಕೀಯ ಉಪಕರಣಗಳು, ಚಾಕೋಲೆಟ್ಸ್, ಬಿಸ್ಕಿತ್ತುಗಳು ಹಾಗೂ ಸಾಲ್ಮನ್ ಮೀನಿನ ಮೇಲಿನ ಸುಂಕವನ್ನು ಗಣನೀಯವಾಗಿ ಇಳಿಸಲಾಗಿದೆ.
ಬ್ರಿಟನ್‌ನಿಂದ ರಿಯಾಯಿತಿಗಳು:
ಶೇ.99ರಷ್ಟು ಭಾರತೀಯ ಉತ್ಪನ್ನಗಳು ಬ್ರಿಟನ್‌ನ ಮಾರುಕಟ್ಟೆಲ್ಲಿ ಸುಂಕರಹಿತವಾಗಿ ಪ್ರವೇಶವನ್ನು ಪಡೆಯಲಿವೆ.
ಯಾವೆಲ್ಲಾ ಭಾರತೀಯ ಕ್ಷೇತ್ರಗಳಿಗೆ ಪ್ರಯೋಜನವಾಗಲಿದೆ?:
ಟೆಕ್ಸ್‌ಟೈಲ್‌ಗಳು, ಉಡುಪು, ಪಾದರಕ್ಷೆ, ಆಟೋ ಭಾಗಗಳು ಹಾಗೂ ವಿದ್ಯುತ್ ವಾಹನಗಳು, ಎಂಜಿನಿಯರಿಂಗ್ ಹಾಗೂ ಉತ್ಪಾದನಾ ಕ್ಷೇತ್ರ, ಮುತ್ತುಗಳು, ಜ್ಯುವೆಲ್ಲರಿ, ಕ್ರೀಡಾ ಸಾಮಾಗ್ರಿಗಳು, ಪೀಠೋಪಕರಣ, ರಾಸಾಯನಿಕಗಳು ಹಾಗೂ ಯಂತ್ರೋಪಕರಣಗಳು.
ಅಲ್ಪಾವಧಿಯ ವೀಸಾಗಳು: ಭಾರತೀಯ ಯೋಗ ಶಿಕ್ಷಕರು, ಬಾಣಸಿಗರು, ಸಂಗೀತಕಲಾವಿದರು ಹಾಗೂ ಸೇವಾಪೂರೈಕೆದಾರರಿಗೆ ದೊರೆಯಲಿವೆ.
ಉಭಯದೇಶಗಳ ನಡುವೆ ಹೂಡಿಕೆಯ ಹರಿವು ಕೂಡಾ ಹೆಚ್ಚಾಗಲಿದೆ.