ಭಾರತ-ಚೀನಾ ಗಡಿಯಲ್ಲಿ ನಾರಿ ಶಕ್ತಿ: ಕಾವಲಿಗೆ ITBP ಮಹಿಳಾ ಯೋಧರು ಸಜ್ಜು
ಸಾಂದರ್ಭಿಕ ಚಿತ್ರ | Photo Credit : indiatoday.in
ಹೊಸದಿಲ್ಲಿ,ಡಿ.28: ಭಾರತದ ಮಹಿಳಾ ಭದ್ರತಾ ಸಿಬ್ಬಂದಿ ಭಾರತ-ಚೀನಾ ಗಡಿಯಲ್ಲಿ ಮುಂಚೂಣಿಯ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದು,ಇಂಡೋ-ಟಿಬೆಟನ್ ಗಡಿ ಪೋಲಿಸ್ (ITBP ) ವಾಸ್ತವಿಕ ನಿಯಂತ್ರಣ ರೇಖೆಯ (LOC) ಬಳಿ 32 ಗಡಿ ಪೋಸ್ಟ್ ಗಳಲ್ಲಿ ವಿಶೇಷ ಮಹಿಳಾ ಬ್ಯಾರಕ್ ಗಳನ್ನು ನಿರ್ಮಿಸಲು ಯೋಜಿಸುತ್ತಿದೆ.
ಇದು ಲಡಾಖ್, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಉತ್ತರಾಖಂಡದ ಮುಂಚೂಣಿ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ಅವಕಾಶವನ್ನು ಒದಗಿಸುತ್ತದೆ. ITBP ಚೀನಾದೊಂದಿಗಿನ ಭಾರತದ ಗಡಿಯ ರಕ್ಷಣೆಯ ಹೊಣೆಗಾರಿಕೆಯನ್ನು ಹೊಂದಿರುವ ಸಶಸ್ತ್ರ ಪೋಲಿಸ್ ಪಡೆಯಾಗಿದೆ.
ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಅಧಿಕೃತ ದಾಖಲೆಗಳ ಪ್ರಕಾರ, ITBP ಇದೇ ಮೊದಲ ಬಾರಿಗೆ 32 ಬಾರ್ಡರ್ ಔಟ್-ಪೋಸ್ಟ್ ಗಳಲ್ಲಿ ಮಹಿಳಾ ಬ್ಯಾರಕ್ ಗಳನ್ನು ನಿರ್ಮಿಸಲಿದೆ. ಪ್ರತಿಯೊಂದು ಬ್ಯಾರಕ್ ಡಾರ್ಮಿಟರಿಗಳು ಹಾಗೂ ಇಬ್ಬರು ಮತ್ತು ಮೂವರು ಹಂಚಿಕೊಳ್ಳಬಹುದಾದ ರೂಮ್‌ಗಳನ್ನು ಹೊಂದಿರಲಿದ್ದು,ಸುಮಾರು 30 ಮಹಿಳಾ ಸಿಬ್ಬಂದಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸಲಿವೆ. ಅಧಿಕಾರಿಗಳಿಗೆ ಪ್ರತ್ಯೇಕ ವಸತಿಗಳನ್ನು ಒದಗಿಸಲಾಗುವುದು.
ಬ್ಯಾರಕ್ ಗಳು ಸಂಪೂರ್ಣ ಸುಸಜ್ಜಿತ ಅಡಿಗೆ ಮನೆ ಮತ್ತು ಆಧುನಿಕ ಶೌಚಾಲಯ ಸೌಲಭ್ಯಗಳೊಂದಿಗೆ ಕೇಂದ್ರ ಭೋಜನ ಸ್ಥಳವನ್ನು ಒಳಗೊಂಡಿರುತ್ತವೆ. ಬ್ಯಾರಕ್ ಗಳ ವಿನ್ಯಾಸವು ಎಲ್‌ಎಸಿಯಲ್ಲಿನ ಕಠಿಣ ಹವಾಮಾನ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ ಸೌರ ಶಾಖ ಬಳಕೆ ಮತ್ತು ಬಲವಾದ ಗಾಳಿಯ ವಿರುದ್ಧ ರಕ್ಷಣೆಯನ್ನು ಕೇಂದ್ರೀಕರಿಸಿದೆ. ಪ್ರಸ್ತುತ ITBP ಸುಮಾರು 4,000 ಮಹಿಳಾ ಸಿಬ್ಬಂದಿಗಳನ್ನು ಹೊಂದಿದ್ದು,ಈ ವಿತ್ತವರ್ಷದಲ್ಲಿ ಇನ್ನೂ 1,375 ಮಹಿಳಾ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಯೋಜಿಸಿದೆ.