ಕೆನಡಾ ಹಿಂಸಾಚಾರದಲ್ಲಿ ತನ್ನ ವಿರುದ್ಧ ಕೇಳಿ ಬಂದ ಆರೋಪಗಳನ್ನು ತಿರಸ್ಕರಿಸಿದ ಭಾರತ
Photo: X/@JustinTrudeau
ಹೊಸದಿಲ್ಲಿ: ಕೆನಡಾದಲ್ಲಿ ನಡೆದ ಹಿಂಸಾಚಾರದಲ್ಲಿ ಭಾರತ ಭಾಗಿಯಾಗಿದೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ಭಾರತ ಮಂಗಳವಾರ ಅಸಂಬದ್ಧ ಎಂದು ಕರೆದಿದೆ.
ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿ ಹಿರಿಯ ರಾ ಅಧಿಕಾರಿಯನ್ನು ಕೆನಡಾ ಉಚ್ಛಾಟಿಸಿದ ಬಳಿಕ ಪ್ರತಿಕ್ರಿಯಿಸಿದ ಭಾರತ, ಕೆನಡಾ ಪ್ರಧಾನಿ ಮಾಡಿರುವ ಆರೋಪವನ್ನು ನಿರಾಕರಿಸಿದೆ.
"ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರದ ಪಾಲ್ಗೊಳ್ಳುವಿಕೆಯ ಆರೋಪಗಳು ಅಸಂಬದ್ಧ ಮತ್ತು ಉದ್ದೇಶಪೂರ್ವಕವಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
"ಇದೇ ರೀತಿಯ ಆರೋಪಗಳನ್ನು ಕೆನಡಾದ ಪ್ರಧಾನಿ ನಮ್ಮ ಪ್ರಧಾನಿಗೆ ಮಾಡಿದ್ದಾರೆ ಮತ್ತು ಅದನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ, ನಮ್ಮದು ಕಾನೂನಿನ ಆಳ್ವಿಕೆ ಮೇಲೆ ಬಲವಾದ ಬದ್ಧತೆಯನ್ನು ಹೊಂದಿರುವ ಪ್ರಜಾಪ್ರಭುತ್ವದ ರಾಜಕೀಯವಾಗಿದೆ” ಎಂದು ಸಚಿವಾಲಯ ಹೇಳಿದೆ.
ಇಂತಹ ಸಲ್ಲದ ಆರೋಪಗಳು ಕೆನಡಾದಲ್ಲಿ ಆಶ್ರಯವನ್ನು ಒದಗಿಸಿರುವ ಮತ್ತು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯನ್ನು ಮುಂದುವರೆಸುವ ಖಾಲಿಸ್ತಾನಿ ಉಗ್ರಗಾಮಿಗಳ ಮೇಲಿನ ಗಮನವನ್ನು ಬದಲಾಯಿಸಲು ಪ್ರಯತ್ನಿಸುತ್ತವೆ ಎಂದು ಸಚಿವಾಲಯ ಹೇಳಿದೆ.
ಸಿಖ್ ಪ್ರತ್ಯೇಕತಾವಾದಿ ನಾಯಕ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟಿಸಿದ ಕೆಲವೇ ಗಂಟೆಗಳ ನಂತರ ಭಾರತ ಸರ್ಕಾರ ಮಂಗಳವಾರ ಕೆನಡಾದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟಿಸಿದೆ. ಮುಂದಿನ ಐದು ದಿನದೊಳಗೆ ಭಾರತವನ್ನು ತೊರೆಯುವಂತೆ ಸಂಬಂಧಪಟ್ಟ ರಾಜತಾಂತ್ರಿಕರಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.