×
Ad

ಗಲ್ಫ್ ಬೆಳವಣಿಗೆಗಳ ನಡುವೆ ರಕ್ಷಣಾ ಸಹಕಾರ ವಿಸ್ತರಣೆಗೆ ಭಾರತ–ಯುಎಇ ಒಪ್ಪಿಗೆ

Update: 2026-01-20 00:08 IST

Photo: PTI

ಹೊಸದಿಲ್ಲಿ: ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ರಕ್ಷಣಾ ಒಪ್ಪಂದದಿಂದ ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ರಾಜತಾಂತ್ರಿಕ ಚರ್ಚೆಗಳ ನಡುವೆಯೇ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ. ಉಭಯ ರಾಷ್ಟ್ರಗಳು ಸೋಮವಾರ ರಕ್ಷಣಾ ಸಹಕಾರ ಒಪ್ಪಂದವನ್ನು ಅಂತಿಮಗೊಳಿಸುವ ಉದ್ದೇಶ ಪತ್ರಕ್ಕೆ (LoI) ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಅವರು, ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯ ಹೊಸದಿಲ್ಲಿ ಭೇಟಿಗೆ ಆಗಮಿಸಿದ್ದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾದರು. ಸಭೆಯ ಬಳಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಪರಸ್ಪರ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ಕಾರ್ಯತಂತ್ರದ ಸ್ವಾಯತ್ತತೆಯ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದ್ದಾರೆ.

ಭಾರತ–ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿ ಬಲಿಷ್ಠ ಹಾಗೂ ಸ್ಥಿರ ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಗುರುತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸೇವಾ ಮುಖ್ಯಸ್ಥರ ಪರಸ್ಪರ ಭೇಟಿಗಳು ಹಾಗೂ ದ್ವಿಪಕ್ಷೀಯ ಮಿಲಿಟರಿ ಅಭ್ಯಾಸಗಳು ಈ ಸಹಕಾರಕ್ಕೆ ವೇಗ ನೀಡಿವೆ ಎಂದು ತಿಳಿಸಲಾಗಿದೆ.

ಇಂಧನ ಕ್ಷೇತ್ರದಲ್ಲಿಯೂ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ಯುಎಇಯ ADNOC ಗ್ಯಾಸ್ ನಡುವೆ 2028ರಿಂದ ಆರಂಭವಾಗುವಂತೆ ವರ್ಷಕ್ಕೆ ಅರ್ಧ ಮಿಲಿಯನ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಗೆ 10 ವರ್ಷಗಳ ಒಪ್ಪಂದ ನಡೆದಿದೆ.

ಇದಲ್ಲದೆ, ನಾಗರಿಕ ಪರಮಾಣು ಸಹಕಾರ ವಿಸ್ತರಣೆಯ ಭಾಗವಾಗಿ, ದೊಡ್ಡ ಪರಮಾಣು ರಿಯಾಕ್ಟರ್‌ಗಳು, ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು (SMR), ಪರಮಾಣು ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಪರಮಾಣು ಸುರಕ್ಷತಾ ಕ್ಷೇತ್ರಗಳಲ್ಲಿ ಸಹಕಾರ ಅನ್ವೇಷಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.

ಗಮನಾರ್ಹವಾಗಿ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ, ಭಾರತ–ಪಾಕಿಸ್ತಾನ ಗಡಿಯಾಚೆಗಿನ ಮಿಲಿಟರಿ ಉದ್ವಿಗ್ನತೆಯ ಕೆಲವೇ ತಿಂಗಳ ಬಳಿಕ ಒಪ್ಪಂದ ನಡೆದಿತ್ತು.

ಈ ಹಿನ್ನೆಲೆಯಲ್ಲಿ, ಭಾರತ ಮತ್ತು ಯುಎಇ ನಡುವಿನ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯನ್ನು ಗಲ್ಫ್ ಪ್ರದೇಶದ ಬದಲಾಗುತ್ತಿರುವ ರಾಜತಾಂತ್ರಿಕ ಸಮೀಕರಣಗಳ ನಡುವೆ ಮಹತ್ವದ ಹೆಜ್ಜೆಯಾಗಿ ನೋಡಲಾಗುತ್ತಿದೆ. ಆದರೆ, ಈ ಒಪ್ಪಂದವು ಯಾವುದೇ ಮೂರನೇ ದೇಶದ ವಿರುದ್ಧ ಪರಸ್ಪರ ಸೇನಾ ರಕ್ಷಣೆಗೆ ಬದ್ಧವಾಗುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News