ಪ್ಯಾರಿಸ್‌ನಲ್ಲಿ ‘ಜೈ ಮಹಾರಾಷ್ಟ್ರ’ ಘೋಷಣೆ: ಭಾರತೀಯ ಪ್ರವಾಸಿಗರ ವರ್ತನೆಗೆ ಟೀಕೆ
ಮುಂಬೈ: ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ ನ ಜನದಟ್ಟಣೆಯ ಮಾಂಟ್ಮಾರ್ಟ್ರೆ ಪ್ರದೇಶದಲ್ಲಿ ಬೀದಿ ಮೈಮ್ ಕಲಾವಿದನೊಬ್ಬನ ಬಳಿ ಭಾರತೀಯ ಪ್ರವಾಸಿಗರ ಗುಂಪು ‘ಜೈ ಮಹಾರಾಷ್ಟ್ರ’, ‘ಜೈ ಶಿವಸೇನೆ’ ಮತ್ತು ‘ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ’ ಎಂಬ ಘೋಷಣೆಗಳನ್ನು ಕೂಗಿರುವ ದೃಶ್ಯಗಳಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.
ವೀಡಿಯೊದಲ್ಲಿ ಕಲಾವಿದನು ಶಾಂತವಾಗಿ ತನ್ನ ಪ್ರದರ್ಶನ ನೀಡುತ್ತಿದ್ದ ವೇಳೆ, ಒಬ್ಬ ವ್ಯಕ್ತಿ ಅವನ ಸುತ್ತ ಕೈ ಹಾಕಿ ಜೋರಾಗಿ ಘೋಷಣೆಗಳನ್ನು ಕೂಗುವುದು ಕಾಣಿಸುತ್ತದೆ. ನಂತರ ಇತರರೂ ಸೇರಿಕೊಂಡು ಹಾಗೆಯೇ ಮುಂದುವರಿಸುತ್ತಾರೆ. ಕಲಾವಿದನು ನಿಲ್ಲಿಸಲು ಸನ್ನೆ ಮಾಡಿದರೂ, ಆ ಮನವಿಯನ್ನು ನಿರ್ಲಕ್ಷಿಸಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿದೆ.
ಈ ಘಟನೆ ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿಗರ ನಡವಳಿಕೆ, ನಾಗರಿಕ ಪ್ರಜ್ಞೆ ಹಾಗೂ ರಾಷ್ಟ್ರೀಯ ಅಥವಾ ರಾಜಕೀಯ ಘೋಷಣೆಗಳ ಸೂಕ್ತತೆ ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ವೀಡಿಯೊದಲ್ಲಿ ಕಾಣುವ ವ್ಯಕ್ತಿ ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಘೋಷಣೆಗಳನ್ನು ಕೂಗುತ್ತಾನೆ. ಕಲಾವಿದನು ಮೌನವಾಗಿರಲು ಸೂಚಿಸಿದರೂ, ಆ ವ್ಯಕ್ತಿ ಇನ್ನಷ್ಟು ಉತ್ಸಾಹದಿಂದ ಹಾಗೆಯೇ ಮಾಡುತ್ತಲೇ ಇರುತ್ತಾನೆ. ಗುಂಪಿನ ಇತರರು ಅದೇ ರೀತಿ ಮಾಡುವುದು ಕಂಡು ಬಂದಿದೆ.
ಘೋಷಣೆಗಳಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಸರನ್ನೂ ಉಲ್ಲೇಖಿಸಿರುವುದು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಊಹಾಪೋಹಗಳು ಹರಡಿವೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ‘ಅನಾಚಾರ’ ಹಾಗೂ ‘ಅವಮಾನಕಾರಿ ವರ್ತನೆ’ ಎಂದು ಟೀಕಿಸಿದ್ದಾರೆ. ಬೀದಿ ಕಲಾವಿದನ ಮನವಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದೇ ಹೆಚ್ಚು ಕಳವಳಕಾರಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.