ತೆಲಂಗಾಣ | ಸಾರ್ವಜನಿಕ ಸ್ಥಳದಲ್ಲೇ ಇರಿದು ಕರ್ನಾಟಕ ಮೂಲದ ವ್ಯಕ್ತಿಯ ಕೊಲೆ
PC | gemini AI
ಹೈದರಾಬಾದ್,ಜ.19: ಸಾರ್ವಜನಿಕರ ಕಣ್ಣೆದುರೇ ಚಿನ್ನದ ಕೆಲಸಗಾರನೋರ್ವನನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ರವಿವಾರ ರಾತ್ರಿ ಛತ್ರಿನಾಕದಲ್ಲಿಯ ಮದ್ಯದಂಗಡಿಯೊಂದರ ಸಮೀಪ ನಡೆದಿದೆ.
ಮೃತ ಸತೀಶ ಕರ್ನಾಟಕ ಮೂಲದವರಾಗಿದ್ದು, ಕೆಲವು ವರ್ಷಗಳ ಹಿಂದೆ ತನ್ನ ತಂದೆ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್‌ಗೆ ತೆರಳಿ ಅಲ್ಲಿ ನೆಲೆಸಿದ್ದಾರೆ.
ರವಿವಾರ ರಜಾದಿನವಾಗಿದ್ದರಿಂದ ಗೆಳೆಯ ಜೈಚಂದ್ ಜೊತೆ ಛತ್ರಿನಾಕದ ಮದ್ಯದಂಗಡಿಗೆ ತೆರಳಿದ್ದರು. ಮದ್ಯ ಸೇವಿಸುತ್ತಿದ್ದಾಗ ಹಿಂದಿನ ಹಣಕಾಸು ವ್ಯವಹಾರಗಳ ಬಗ್ಗೆ ಇಬ್ಬರೂ ಜಗಳವಾಡಿದ್ದು, ಅವರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಸತೀಶ ಮಾಡಿದ್ದ ನಿಂದನೆಗಳಿಂದ ಸಿಟ್ಟಿಗೆದ್ದಿದ್ದ ಜೈಚಂದ್ ಮನೆಗೆ ತೆರಳಿ ತನ್ನ ಸ್ನೇಹಿತ ಮಹೇಶ್ ಜೊತೆ ಚೂರಿ ಹಿಡಿದುಕೊಂಡು ಬಂದು ಸತೀಶ್ ಅವರ ಕುತ್ತಿಗೆ, ಹೊಟ್ಟೆ ಮತ್ತು ಮುಖಕ್ಕೆ ಇರಿದಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಲಿಸರು ಗಂಭೀರವಾಗಿ ಗಾಯಗೊಂಡಿದ್ದ ಸತೀಶರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಛತ್ರಿನಾಕ ಎಸಿಪಿ ಸಿ.ಚಂದ್ರಶೇಖರ್ ತಿಳಿಸಿದರು. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಜೈಚಂದ್‌ನನ್ನು ಬಂಧಿಸಿದ್ದಾರೆ.