×
Ad

ಭಾರತ-ಅಮೆರಿಕ ಸಹಜ ಪಾಲುದಾರರು: ಟ್ರಂಪ್ ಜೊತೆ ಮಾತುಕತೆಗೆ ಮೋದಿ ಹಂಬಲ

Update: 2025-09-10 20:48 IST

ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ | PC :  ANI 

ಹೊಸದಿಲ್ಲಿ,ಸೆ.10: ಭಾರತ-ಅಮೆರಿಕ ಉದ್ವಿಗ್ನತೆ ಶಮನಗೊಳಿಸುವತ್ತ ಮಹತ್ವದ ಹೆಜ್ಜೆಯೆಂಬಂತೆ, ಹೊಸದಿಲ್ಲಿ ಹಾಗೂ ವಾಶಿಂಗ್ಟನ್‌ನ ನಿಯೋಗಗಳು ತಮ್ಮ ನಡುವಿನ ವಾಣಿಜ್ಯ ಮಾತುಕತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಅಮೆರಿಕ ಅಧ್ಯಕ್ಷರ ಜೊತೆ ಮಾತುಕತೆಗೆ ಎದುರು ತಾನು ನೋಡುತ್ತಿರುವುದಾಗಿ ಹೇಳಿದ್ದಾರೆ.

‘‘ಭಾರತ ಹಾಗೂ ಅಮೆರಿಕ ಆಪ್ತ ಸ್ನೇಹಿತರು ಹಾಗೂ ಸಹಜ ಪಾಲುದಾರರಾಗಿದ್ದಾರೆ. ನಮ್ಮ ವಾಣಿಜ್ಯ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಗೆ ಅಪರಿಮಿತ ಅವಕಾಶಗಳ ಅನಾವರಣಕ್ಕೆ ದಾರಿ ಮಾಡಿ ಕೊಡಲಿದೆ. ಈ ಕುರಿತಾದ ಮಾತುಕತೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ನಮ್ಮ ತಂಡಗಳು ಶ್ರಮಿಸುತ್ತಿವೆ ’’ ಎಂದು ಪ್ರಧಾನಿ ಪೋಸ್ಟ್‌ ನಲ್ಲಿ ಬರೆದಿದ್ದಾರೆ.

‘‘ಅಮೆರಿಕ ಅಧ್ಯಕ್ಷರ ಜೊತೆ ಮಾತುಕತೆಗೆ ನಾನು ಎದುರು ನೋಡುತ್ತಿದ್ದೇನೆ. ಉಭಯ ದೇಶಗಳ ಜನರಿಗೆ ಉಜ್ವಲ ಹಾಗೂ ಅಧಿಕ ಸಮೃದ್ಧಿಯ ಭವಿಷ್ಯವನ್ನು ಗಳಿಸಿಕೊಡಲು ನಾವು ಶ್ರಮಿಸಲಿದ್ದೇವೆ ’’ ಎಂದವರು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಎಕ್ಸ್‌ ನಲ್ಲಿ ಮಾಡಿದ ಪೋಸ್ಟ್ ಅನ್ನು ಟ್ರಂಪ್ ಅವರು ತನ್ನ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಮರುಪೋಸ್ಟ್ ಮಾಡುವ ಮೂಲಕ ಉಭಯದೇಶಗಳ ಬಾಂಧವ್ಯದಲ್ಲಿ ಸುಧಾರಣೆಯ ಸಂಕೇತವನ್ನು ನೀಡಿದ್ದಾರೆ.

ಭಾರತದ ಜೊತೆ ತನ್ನ ಆಡಳಿತವು ವಾಣಿಜ್ಯ ಮಾತುಕತೆಗಳನ್ನು ಪುನಾರಂಭಿಸಿದೆಯೆಂದು ಮಂಗಳವಾರ ಬೆಳಗ್ಗೆ ಟ್ರಂಪ್ ಘೋಷಿಸಿದ್ದರು. ಉಭಯದೇಶಗಳ ನಡುವಿನ ವಾಣಿಜ್ಯಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ನಿವಾರಿಸಲು ಭಾರತ ಹಾಗೂ ಅಮೆರಿಕ ಮಾತುಕತೆಗಳನ್ನು ಮುಂದುವರಿಸಿವೆ ಎಂದು ಅವರು ಟ್ರೂಥ್ ಸೋಷಿಯಲ್‌ ನಲ್ಲಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ತನ್ನ ‘ಉತ್ತಮ ಸ್ನೇಹಿತ’ ಎಂದು ಬಣ್ಣಿಸಿದ ಅವರು ಮುಂಬರುವ ದಿನಗಳಲ್ಲಿ ಅವರೊಂದಿಗೆ ಮಾತುಕತೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದರು. ಉಭಯ ಮಹಾನ್ ದೇಶಗಳ ನಡುವಣ ಮಾತುಕತೆಗಳು ಯಶಸ್ವಿಯಾಗಿ ಪೂರ್ಣಗೊಳಿಸಲು ಕಷ್ಟವಾಗಲಾರದು ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ಟ್ರಂಪ್ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಹಾಗೂ ತಾನು ಎಂದಿಗೂ ಸ್ನೇಹಿತರು ಹೇಳಿದ್ದರು ಹಾಗೂ ಮೋದಿ ಓರ್ವ ಮಹಾನ್ ಪ್ರಧಾನಿ ಎಂದು ಪ್ರಶಂಸಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News