×
Ad

ಭಾರತ- ಅಮೆರಿಕ ಸಹಭಾಗಿತ್ವದ ಅತ್ಯಂತ ದುಬಾರಿ ಉಪಗ್ರಹ ಮಾರ್ಚ್ ನಲ್ಲಿ ಉಡಾವಣೆ

Update: 2024-12-24 08:06 IST

PC: x.com/NewsIADN

ಹೊಸದಿಲ್ಲಿ: ಭಾರಿ ವಿಳಂಬದ ಬಳಿಕ ಭಾರತ- ಅಮೆರಿಕ ಜಂಟಿ ಸಹಭಾಗಿತ್ವದಲ್ಲಿ ಒಂದು ದಶಕದಿಂದ ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಭೂ ಸರ್ವೇಕ್ಷಣಾ ಉಪಗ್ರಹ ನಿಸಾರ್ ಅನ್ನು ಮುಂದಿನ ಮಾರ್ಚ್ ತಿಂಗಳಲ್ಲಿ ಉಡಾಯಿಸಲಾಗುವುದು ಎಂದು ನಾಸಾ ಪ್ರಕಟಿಸಿದೆ. 2024ರಲ್ಲಿ ಈ ಉಪಗ್ರಹ ಉಡಾವಣೆಗೆ ಯೋಜಿಸಲಾಗಿತ್ತು.

"ಈ ಉಪಗ್ರಹವನ್ನು 2025ರ ಮಾರ್ಚ್ ನಲ್ಲಿ ಉಡಾಯಿಲು ನಾಸಾ ಹಾಗೂ ಇಸ್ರೋ ಚಿಂತನೆ ನಡೆಸಿದೆ. ನಾಸಾ-ಇಸ್ರೋ ಸಿಂಥೆಟಿಕ್ ಅಪಾರ್ಚರ್ ರಾಡರ್ ನಿಸಾರ್, ಭೂಮಿಯ ಎಲ್ಲ ಭಾಗವನ್ನು ಮತ್ತು ಹಿಮಚ್ಛಾದಿತ ಮೇಲ್ಮೈಯನ್ನು, ಭೂಗ್ರಹದ ಪರಿಸರ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ಅಧ್ಯಯನ ಮಾಡಲು 12 ದಿನಗಳಲ್ಲಿ ಎರಡು ಬಾರಿ ಸ್ಕ್ಯಾನ್ ಮಾಡಲಿದೆ. ಭೂಭಾಗ,ಸಮುದ್ರದ ಮಂಜುಗಡ್ಡೆ ಹಾಗೂ ಘನ ಭೂಮಿಯನ್ನು ಇದು ಅಧ್ಯಯನ ಮಾಡಲಿದೆ. ನಿಸಾರ್ ಉಪಗ್ರಹವನ್ನು ಭಾರತದ ಆಗ್ನೇಯ ಕರಾವಳಿಯ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾಯಿಸಲಾಗುವುದ" ಎಂದು ವಿವರಿಸಿದೆ.

2.8 ಟನ್ ತೂಕದ ನಿಸಾರ್ ಉಪಗ್ರಹದ ಅಭಿವೃದ್ಧಿ 2014ರಲ್ಲಿ ಆರಂಭವಾಗಿದ್ದು, ಉಭಯ ದೇಶಗಳ ನಡುವೆ ಒಪ್ಪಂದ ಮಾಡಿಕೊಂಡ ಬಳಿಕ ಅತ್ಯಂತ ನಿಖರವಾಗಿ ಭೂಗ್ರಹವನ್ನು ಕಣ್ಗಾವಲು ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. 5800 ಕೋಟಿ ರೂಪಾಯಿ ಅಂದಾಜು ವೆಚ್ಚದ ಇಮೇಜಿಂಗ್ ಉಪಗ್ರಹ ವಿಶ್ವದಲ್ಲೇ ವಿಶಿಷ್ಟ ಹಾಗೂ ಅತ್ಯಾಧುನಿಕ ಎನಿಸಿದೆ. ಅವಳಿ ಫ್ರೀಕ್ವೆನ್ಸಿ ರಾಡಾರ್ಗಳು ಅಂದರೆ ನಾಸಾದ ಎಲ್-ಬ್ಯಾಂಡ್ (1.25 ಗಿಗಾ ಹಟ್ಝ್) ಮತ್ತು ಇಸ್ರೋದ ಎಸ್-ಬ್ಯಾಡ್ (3.2ಜಿಎಚ್ ಝೆಡ್) ಗಳು ಸರಿಸಾಟಿ ಇಲ್ಲದ ನಿಖರ ದತ್ತಾಂಶವನ್ನು ನೀಡಲಿದೆ.

ಇದರ ಅತ್ಯಂತ ಪ್ರಮುಖ ಬಿಡಿಭಾಗಗಳನ್ನು ಅಮೆರಿಕದಿಂದ ಭಾರತಕ್ಕೆ 2024ರ ಅಕ್ಟೋಬರ್ ನಲ್ಲಿ ರವಾನಿಸಲಾಗಿತ್ತು. ಆದರೆ 12 ಮೀಟರ್ ಉದ್ದದ ರಾಡಾರ್ ರಿಫ್ಲೆಕ್ಟರ್ ನ ಹಲವು ತಾಂತ್ರಿಕ ಸಂಕೀರ್ಣತೆಗಳಿಂದಾಗಿ ಯೋಜನೆ ವಿಳಂಬವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News