×
Ad

ಇಂಫಾಲ ವಿಮಾನ ನಿಲ್ದಾಣ ಬಳಿ ಯುಎಫ್‌ಒ ಕಾಣಿಸಿಕೊಂಡ ಬಳಿಕ ಶೋಧಕ್ಕಾಗಿ ಎರಡು ರಫೇಲ್ ಜೆಟ್‌ಗಳನ್ನು ರವಾನಿಸಿದ್ದ ಐಎಎಫ್

Update: 2023-11-20 15:45 IST

ಸಾಂದರಭಿಕ ಚಿತ್ರ (PTI)

ಹೊಸದಿಲ್ಲಿ: ಮಣಿಪುರದ ಇಂಫಾಲ ವಿಮಾನ ನಿಲ್ದಾಣದ ಬಳಿ ರವಿವಾರ ಅಪರಿಚಿತ ಹಾರುವ ವಸ್ತು (ಯುಎಫ್‌ಒ) ಕಾಣಿಸಿಕೊಂಡ ಮಾಹಿತಿ ಲಭಿಸಿದ ಬೆನ್ನಿಗೇ ಭಾರತೀಯ ವಾಯುಪಡೆ (ಐಎಎಫ್)ಯು ಅವುಗಳ ಶೋಧಕ್ಕಾಗಿ ತನ್ನ ರಫೇಲ್ ಯುದ್ಧವಿಮಾನಗಳನ್ನು ರವಾನಿಸಿತ್ತು.

ಅಪರಾಹ್ನ 2:30ರ ಸುಮಾರಿಗೆ ಇಂಫಾಲ ವಿಮಾನ ನಿಲ್ದಾಣದ ಸಮೀಪ ಯುಎಫ್‌ಒ ಕಾಣಿಸಿಕೊಂಡ ಬಳಿಕ ಕೆಲವು ವಾಣಿಜ್ಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಇಂಫಾಲಕ್ಕೆ ಆಗಮಿಸುತ್ತಿದ್ದ ಎರಡು ವಿಮಾನಗಳನ್ನು ಬೇರೆ ಕಡೆಗೆ ತಿರುಗಿಸಲಾಗಿತ್ತು.

ಯುಎಫ್‌ಒ ಕಾಣಿಸಿಕೊಂಡ ಮಾಹಿತಿ ಲಭಿಸಿದ ತಕ್ಷಣ ಅದನ್ನು ಪತ್ತೆ ಹಚ್ಚಲು ಸಮೀಪದ ವಾಯುನೆಲೆಯಿಂದ ರಫೇಲ್ ಯುದ್ಧವಿಮಾನವೊಂದನ್ನು ನಿಯೋಜಿಸಲಾಗಿತ್ತು. ಅತ್ಯಾಧುನಿಕ ಸಂವೇದಕಗಳಿಂದ ಸಜ್ಜಿತ ವಿಮಾನವು ಯುಎಫ್‌ಒ ಶೋಧಕ್ಕಾಗಿ ಶಂಕಿತ ಪ್ರದೇಶದಲ್ಲಿ ಕೆಳಮಟ್ಟದಲ್ಲಿ ಹಾರಾಟ ನಡೆಸಿತ್ತು. ಆದರೆ ಅಲ್ಲಿ ಏನೂ ಪತ್ತೆಯಾಗಿರಲಿಲ್ಲ. ಮೊದಲ ವಿಮಾನವು ಮರಳಿದ ಬಳಿಕ ಇನ್ನೊಂದು ರಫೇಲ್ ಯುದ್ಧವಿಮಾನವನ್ನು ಕಳುಹಿಸಲಾಗಿತ್ತು,ಆದರೆ ಪ್ರದೇಶದಲ್ಲಿ ಎಲ್ಲಿಯೂ ಯುಎಫ್‌ಒ ಪತ್ತೆಯಾಗಿಲ್ಲ. ಇಂಫಾಲ ವಿಮಾನ ನಿಲ್ದಾಣದ ಮೇಲೆ ಯುಎಫ್‌ಒ ಹಾರಾಡುತ್ತಿದ್ದ ವೀಡಿಯೊಗಳಿರುವುದರಿಂದ ಸಂಬಂಧಿತ ಏಜೆನ್ಸಿಗಳು ವಿವರಗಳಿಗಾಗಿ ಪ್ರಯತ್ನಿಸುತ್ತಿವೆ ಎಂದು ರಕ್ಷಣಾ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.

ಇಂಫಾಲ ವಿಮಾನ ನಿಲ್ದಾಣವನ್ನು ವಿಮಾನಗಳ ಹಾರಾಟಕ್ಕೆ ತೆರವುಗೊಳಿಸಿದ ಬಳಿಕ ಶಿಲಾಂಗ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಐಎಎಫ್‌ನ ಈಸ್ಟರ್ನ್ ಕಮಾಂಡ್, ವಾಯುಪಡೆಯು ತನ್ನ ವಾಯು ರಕ್ಷಣಾ ಪ್ರತಿಕ್ರಿಯಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ನಂತರ ಯುಎಫ್‌ಒ ಕಂಡು ಬಂದಿಲ್ಲ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿತ್ತು. ಆದರೆ ಅದು ತಾನು ಕೈಗೊಂಡ ಕ್ರಮಗಳ ನಿರ್ದಿಷ್ಟ ವಿವರಗಳನ್ನು ನೀಡಿರಲಿಲ್ಲ.

ಐಎಎಫ್‌ನ ರಫೇಲ್ ಯುದ್ಧವಿಮಾನಗಳನ್ನು ಪಶ್ಚಿಮ ಬಂಗಾಳದ ಹಾಶಿಮಾರಾ ವಾಯುನೆಲೆಯಲ್ಲಿ ನಿಯೋಜಿಸಲಾಗಿದ್ದು,ಅವು ಪೂರ್ವ ವಿಭಾಗದ ವಿವಿಧ ವಾಯುನೆಲೆಗಳಿಂದ ಚೀನಾ ಗಡಿಯುದ್ದಕ್ಕೂ ಹಾರಾಟ ನಡೆಸುತ್ತಿರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News