×
Ad

ಭಾರತೀಯ ಸೇನೆ ಪ್ರಧಾನಿ ಮೋದಿಯ ಪಾದಗಳಿಗೆ ನಮಸ್ಕರಿಸುತ್ತದೆ: ಮಧ್ಯಪ್ರದೇಶ ಡಿಸಿಎಂ ವಿವಾದಾತ್ಮಕ ಹೇಳಿಕೆ

Update: 2025-05-16 16:17 IST

ಜಗದೀಶ್ ದೇವ್ಡಾ (Screengrab:X)

ಭೋಪಾಲ್ : ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ʼಭಯೋತ್ಪಾದಕರ ಸಹೋದರಿʼ ಎಂದು ಹೇಳಿಕೆ ನೀಡುವ ಮೂಲಕ ಮಧ್ಯಪ್ರದೇಶದ ಸಚಿವ ವಿಜಯ್ ಶಾ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ʼಭಾರತೀಯ ಸೇನೆ ಪ್ರಧಾನಿ ನರೇಂದ್ರ ಮೋದಿಯ ಪಾದಗಳಿಗೆ ನಮಸ್ಕರಿಸುತ್ತದೆʼ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಈ ಕುರಿತ ವೀಡಿಯೊವನ್ನು ಕಾಂಗ್ರೆಸ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಡಿಸಿಎಂ ಜಗದೀಶ್ ದೇವ್ಡಾ ಹೇಳಿಕೆ ಕೀಳು ಅಭಿರುಚಿಯ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್, ದೇಶದ ಸೈನ್ಯ ಮತ್ತು ಸೈನಿಕರು ಪ್ರಧಾನಿ ಮೋದಿಯವರ ಪಾದಗಳಿಗೆ ನಮಸ್ಕರಿಸುತ್ತಾರೆ ಎಂದು ಮಧ್ಯಪ್ರದೇಶದ ಬಿಜೆಪಿ ಸರಕಾರದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಹೇಳಿದ್ದಾರೆ. ಜಗದೀಶ್ ದೇವ್ಡಾ ಅವರ ಈ ಹೇಳಿಕೆ ಕೀಳು ಅಭಿರುಚಿಯ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಸೇನೆಯ ಶೌರ್ಯ ಮತ್ತು ಧೈರ್ಯಕ್ಕೆ ಮಾಡಿದ ಅವಮಾನ. ಇಂದು ಇಡೀ ದೇಶವೇ ಸೈನ್ಯದ ಮುಂದೆ ತಲೆಬಾಗುತ್ತಿರುವಾಗ, ಬಿಜೆಪಿ ನಾಯಕರು ನಮ್ಮ ಕೆಚ್ಚೆದೆಯ ಸೈನ್ಯದ ಬಗ್ಗೆ ತಮ್ಮ ಕಳಪೆ ಚಿಂತನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಮತ್ತು ಜಗದೀಶ್ ದೇವ್ಡಾ ಕ್ಷಮೆಯಾಚಿಸಬೇಕು. ಅವರನ್ನು ತಮ್ಮ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.

ಎಪ್ರಿಲ್ 22ರಂದು 26 ಮಂದಿಯನ್ನು ಹತ್ಯೆಗೈದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡುತ್ತಾ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News