×
Ad

ಮುಸ್ಲಿಂ ವ್ಯಕ್ತಿಯ ಹತ್ಯೆಯನ್ನು ʼಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯʼ ಎಂದು ತಿರುಚಿದ ಭಾರತೀಯ ಮಾಧ್ಯಮಗಳು!

Update: 2025-07-14 15:09 IST

Photo:X/@zoo_bear

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಗುಂಪೊಂದು ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದಿದ್ದು, ಭಾರತೀಯ ಮಾಧ್ಯಮಗಳು ಮೃತ ವ್ಯಕ್ತಿಯನ್ನು ಹಿಂದೂ ಎಂದು ಗುರುತಿಸಿ ತಪ್ಪಾದ ವರದಿಯನ್ನು ಬಿತ್ತರಿಸಿದೆ. ಎನ್‌ಡಿಟಿವಿ, ಇಂಡಿಯಾ ಟುಡೇ ಮತ್ತು WION ಸೇರಿದಂತೆ ಹಲವು ಭಾರತೀಯ ಮಾಧ್ಯಮಗಳು ʼಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯʼ ಎಂಬ ರೀತಿಯಲ್ಲಿ ಈ ಘಟನೆಯನ್ನು ವರದಿಯನ್ನು ಮಾಡಿದೆ.

“ಬಾಂಗ್ಲಾದಲ್ಲಿ ಹಿಂದು ಹತ್ಯೆಗೈದು ಶವದ ಮೇಲೆ ಕುಣಿದು ವಿಕೃತಿ” ಎಂದು ಕನ್ನಡಪ್ರಭ ಪತ್ರಿಕೆಯು ವರದಿ ಮಾಡಿದ್ದು, ಸತ್ಯ ಪರಿಶೀಲನೆ ವೇಳೆ ಈ ವರದಿಗಳೆಲ್ಲವೂ ಸುಳ್ಳು ಎನ್ನುವುದು ಬಯಲಾಗಿದೆ. ಉದಯವಾಣಿಯೂ ʼಬಾಂಗ್ಲಾದೇಶದಲ್ಲಿ ಹಿಂದೂ ವ್ಯಾಪಾರಿಯ ಥಳಿಸಿ ಹತ್ಯೆʼ ಎಂದು ಪ್ರಕಟಿಸಿದೆ.

 

 

ಹತ್ಯೆಗೀಡಾದ ಲಾಲ್ ಚಂದ್ ಅವರನ್ನು ಹಿಂದೂ ಎಂದು ಹೇಳಿಕೊಂಡು ಅನೇಕ ಭಾರತೀಯ ಮಾಧ್ಯಮಗಳು ಸುಳ್ಳು ವರದಿಗಳನ್ನು ಪ್ರಕಟಿಸಿವೆ. ಆದರೆ, ಮೃತ ವ್ಯಕ್ತಿಯು ಮುಸ್ಲಿಮನಾಗಿದ್ದು, ಅವರ ತಂದೆಯ ಹೆಸರು ಎಂಡಿ ಅಯುಬ್ ಅಲಿ ಮತ್ತು ಅವರ ತಾಯಿಯ ಹೆಸರು ಅಲಿಯಾ ಬೇಗಂ ಎಂದು ಸಿಎ ಪ್ರೆಸ್ ವಿಂಗ್ ಫ್ಯಾಕ್ಟ್ಸ್ ಸತ್ಯಪರಿಶೀಲನೆ ವರದಿ ತಿಳಿಸಿದೆ.

ಢಾಕಾದ ಮಿಟ್‌ಫೋರ್ಡ್ ಆಸ್ಪತ್ರೆ (ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು) ಮುಂದೆ ಉದ್ರಿಕ್ತ ಜನರ ಗುಂಪು ಗುಜಿರಿ ಉದ್ಯಮಿ ಸೋಹಾಗ್ (39) ಅಲಿಯಾಸ್‌ ಲಾಲ್ ಚಂದ್ ಅವರನ್ನು ಭೀಕರವಾಗಿ ಥಳಿಸಿ ಹತ್ಯೆಗೈದಿತ್ತು.

ಜುಲೈ 9 ರಂದು, ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಗೇಟ್ ಸಂಖ್ಯೆ 3 ರ ಮುಂದೆ ಈ ದಾರುಣ ಹತ್ಯೆ ನಡೆದಿದ್ದು, ಸೊಹಾಗ್ ಮರಣದ ನಂತರ, ಅವರ ದೇಹದ ಮೇಲೆ ಕಲ್ಲುಗಳನ್ನು‌ ಎತ್ತಿ ಹಾಕಿ ವಿಕೃತಿ ಮೆರೆಯಲಾಗಿತ್ತು. ಈ ಭೀಕರ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದವು. ಮಾಧ್ಯಮಗಳು, ಮೃತ ವ್ಯಕ್ತಿಯನ್ನು ಹಿಂದೂ ಎಂದು ಬಿಂಬಿಸಿದ್ದರಿಂದ, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಈ ಆಲ್ಟ್ ನ್ಯೂಸ್ ಸಹ ಸ್ಥಾಪಕ ಮುಹಮ್ಮದ್ ಝುಬೇರ್ ಕೂಡಾ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದು, "ಬಾಂಗ್ಲಾದೇಶದಲ್ಲಿ ಗುಂಪು ಹಲ್ಲೆಯಿಂದ ಕೊಲ್ಲಲ್ಪಟ್ಟ ವ್ಯಕ್ತಿಯ ಹೆಸರು ಮುಹಮ್ಮದ್ ಸೊಹಾಗ್ ಅಲಿಯಾಸ್ ಲಾಲ್ ಚಂದ್ ಮಿಯಾ. ನೀವು ಹೇಳುವಂತೆ ಅವನು ಹಿಂದೂ ಅಲ್ಲ." ಎಂದು NDTV ಅನ್ನು ಟ್ಯಾಗ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News