×
Ad

ಏರ್ ಇಂಡಿಯಾ ವಿಮಾನ ದುರಂತ ಕುರಿತ ವರದಿ | ʼವಾಲ್ ಸ್ಟ್ರೀಟ್ ಜರ್ನಲ್ʼ, ʼರಾಯಿಟರ್ಸ್‌ʼಗೆ ನೋಟಿಸ್ ನೀಡಿದ ಭಾರತೀಯ ಪೈಲಟ್‌ಗಳ ಒಕ್ಕೂಟ

Update: 2025-07-19 15:56 IST

Photo credit: PTI

ಹೊಸದಿಲ್ಲಿ : ಜೂನ್ 12ರಂದು ಸಂಭವಿಸಿದ ಏರ್‌ಇಂಡಿಯಾ ವಿಮಾನ ದುರಂತದ ಕುರಿತ ವರದಿಗೆ ಸಂಬಂಧಿಸಿ ಭಾರತೀಯ ಪೈಲಟ್‌ಗಳ ಒಕ್ಕೂಟ (FIP) ಶುಕ್ರವಾರ ʼದಿ ವಾಲ್ ಸ್ಟ್ರೀಟ್ ಜರ್ನಲ್ʼ ಮತ್ತು ʼರಾಯಿಟರ್ಸ್‌ʼಗೆ ನೋಟಿಸ್ ನೀಡಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.

ಭಾರತೀಯ ಪೈಲಟ್‌ಗಳ ಒಕ್ಕೂಟದ (FIP) ಅಧ್ಯಕ್ಷ ಸಿ.ಎಸ್.ರಾಂಧವ ಅವರು ಈ ಕುರಿತು ಪ್ರತಿಕ್ರಿಯಿಸಿ, ವರದಿಯ ಕುರಿತು ಎಫ್ಐಪಿ ಕಾನೂನು ಕ್ರಮ ಕೈಗೊಂಡಿದೆ. ವಾಲ್ ಸ್ಟ್ರೀಟ್ ಜರ್ನಲ್ & ರಾಯಿಟರ್ಸ್‌ಗೆ ಕ್ಷಮೆಯಾಚಿಸಲು ನೋಟಿಸ್ ನೀಡಿದೆ ಎಂದು ಹೇಳಿದರು.

ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳು ಪರಿಶೀಲಿಸದ ವರದಿಗಳ ಮೂಲಕ ಪದೇ ಪದೇ ತಪ್ಪು ನಿರೂಪಣೆ ಮಾಡಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ವಿಮಾನ ದುರಂತದ ಕುರಿತು ತನಿಖೆ ನಡೆಯುತ್ತಿರುವಾಗ ಇಂತಹ ಕ್ರಮಗಳು ಬೇಜವಾಬ್ಧಾರಿಯಿಂದ ಕೂಡಿರುತ್ತವೆ ಎಂದು ಹೇಳಿದರು.

ವಿಮಾನ ದುರಂತ ಘಟನೆಯಿಂದ ಜನರಲ್ಲಿ ಆಘಾತ ಉಂಟಾಗಿದೆ. ಸಾರ್ವಜನಿಕರಲ್ಲಿ ಆತಂಕ ಮೂಡಿಸುವ ಸಮಯ ಇದಲ್ಲ. ಆಧಾರರಹಿತ ಮಾಹಿತಿ ಮೂಲಕ ಭಾರತೀಯ ವಾಯುಯಾನ ಉದ್ಯಮದ ಸುರಕ್ಷತೆಯ ಬಗ್ಗೆ ಜನರಲ್ಲಿ ಆತಂಕ ಮೂಡಿಸುವುದು ಸರಿಯಲ್ಲ ಹೇಳಿದರು.

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನಡೆಸುತ್ತಿರುವ ತನಿಖೆಯನ್ನು ಉಲ್ಲೇಖಿಸಿ, ಅಧಿಕೃತ ದೃಢೀಕರಣ ಮತ್ತು ಅಂತಿಮ ವರದಿ ಬರದೆ ಅಪಘಾತದ ಕಾರಣವನ್ನು ಊಹಿಸುವುದು ಅಥವಾ ಯಾವುದೇ ವ್ಯಕ್ತಿಗಳು ವಿಶೇಷವಾಗಿ ಮೃತ ಪೈಲಟ್‌ಗಳು ತಪ್ಪು ಮಾಡಿದ್ದಾರೆ ಎಂದು ಆರೋಪಿಸುವ ಯಾವುದೇ ವಿಷಯವನ್ನು ಪ್ರಕಟನೆ ಅಥವಾ ಪ್ರಸಾರ ಮಾಡದಂತೆ ತಡೆಯಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ.

ಇಂತಹ ಊಹಾತ್ಮಕ ವಿಷಯದ ಪ್ರಕಟನೆಯು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಮೃತ ಪೈಲಟ್‌ಗಳ ಖ್ಯಾತಿಗೆ ಗಂಭೀರ ಮತ್ತು ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ವಿಮಾನ ದುರಂತದ ಬಗ್ಗೆ ಅಧಿಕಾರಿಗಳು ಯಾವುದೇ ಅಂತಿಮ ವರದಿಯನ್ನು ಬಿಡುಗಡೆ ಮಾಡಿಲ್ಲ. ವರದಿಯು ಇತರ ಮೂಲಗಳ ಮಾಹಿತಿಯನ್ನು ಆಧರಿಸಿದೆ ಎಂದು ಸ್ಪಷ್ಟೀಕರಣವನ್ನು ನೀಡುವಂತೆ ಎಫ್ಐಪಿ ಆಗ್ರಹಿಸಿದೆ.

ಈ ನೋಟಿಸ್‌ಗೆ ಸ್ಪಂದಿಸದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಬಹುದು ಎಂದು ಎಫ್ಐಪಿ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್‌ಗೆ ಕಳುಹಿಸಿದ ನೋಟಿಸ್‌ನಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News