ನೇಪಾಳದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಮಹಿಳೆ: ರಕ್ಷಣೆಗಾಗಿ ಮನವಿ
PC :indiatoday.in
ಹೊಸದಿಲ್ಲಿ, ಸೆ. 10: ವಾಲಿಬಾಲ್ ಲೀಗ್ ಪಂದ್ಯಾವಳಿಗಾಗಿ ನೇಪಾಳಕ್ಕೆ ತೆರಳಿರುವ ಭಾರತೀಯ ಮಹಿಳೆಯೊಬ್ಬರು ಹಿಂಸಾಪೀಡಿತ ದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ನೇಪಾಳದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಉಪಾಸನಾ ಗಿಲ್ ಅವರು ಪೋಖರ ಎಂಬ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ತುರ್ತು ನೆರವಿಗಾಗಿ ಮನವಿ ಮಾಡಿದ್ದಾರೆ.
ನೇಪಾಳದಲ್ಲಿ ನಡೆದಿರುವ ಹಿಂಸಾಚಾರದಲ್ಲಿ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರತಿಭಟನಾಕಾರರು ತಾನು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಿದ್ದು, ತನ್ನೆಲ್ಲಾ ಸಾಮಾನುಗಳನ್ನು ಬಿಟ್ಟು ಪ್ರಾಣ ರಕ್ಷಣೆಗಾಗಿ ಅಲ್ಲಿಂದ ಪರಾರಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
‘‘ನನ್ನ ಹೆಸರು ಉಪಾಸನಾ ಗಿಲ್. ನಾನು ಈ ವೀಡಿಯೊವನ್ನು ಪ್ರಫುಲ್ ಗಾರ್ಗ್ ಗೆ ಕಳುಹಿಸುತ್ತಿದ್ದೇನೆ. ನನಗೆ ದಯವಿಟ್ಟು ಸಹಾಯ ಮಾಡುವಂತೆ ನಾನು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡುತ್ತೇನೆ. ಸಹಾಯ ಮಾಡಲು ಯಾರಿಗೆಲ್ಲಾ ಸಾಧ್ಯವಿದೆಯೋ ದಯವಿಟ್ಟು ಸಹಾಯ ಮಾಡಿ. ನಾನು ಇಲ್ಲಿ ನೇಪಾಳದ ಪೋಖರದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ’’ ಎಂದು ತನ್ನ ವೀಡಿಯೊ ಮನವಿಯಲ್ಲಿ ಅವರು ಹೇಳಿದ್ದಾರೆ.
‘‘ನಾನು ವಾಲಿಬಾಲ್ ಲೀಗೊಂದನ್ನು ನಡೆಸಲು ಇಲ್ಲಿಗೆ ಬಂದಿದ್ದೆ. ನಾನು ತಂಗಿದ್ದ ಹೊಟೇಲನ್ನು ಈಗ ಸುಟ್ಟು ಹಾಕಲಾಗಿದೆ. ನನ್ನೆಲ್ಲಾ ವಸ್ತುಗಳು ನನ್ನ ಹೊಟೇಲ್ ಕೋಣೆಯಲ್ಲಿದ್ದವು. ನಾನು ತಂಗಿದ್ದ ಇಡೀ ಹೊಟೇಲ್‌ಗೆ ಬೆಂಕಿ ಕೊಡಲಾಗಿದೆ. ನಾನ ಆಗ ಸ್ಪಾದಲ್ಲಿದ್ದೆ. ಜನರು ದೊಡ್ಡ ದೊಣ್ಣೆಗಳನ್ನು ಹಿಡಿದುಕೊಂಡು ನನ್ನ ಹಿಂದೆ ಓಡಿ ಬರುತ್ತಿದ್ದರು. ನಾನು ಹೇಗೋ ನನ್ನ ಜೀವ ಉಳಿಸಿಕೊಂಡೆ’’ ಎಂದು ಅವರು ಹೇಳಿದ್ದಾರೆ.