×
Ad

ಭಾರತೀಯ ಯುವಜನರು ಸುಶಿಕ್ಷಿತರಾಗಿದ್ದರೆ ನಿರುದ್ಯೋಗಿಗಳಾಗುವ ಸಾಧ್ಯತೆ ಹೆಚ್ಚು: ಐಎಲ್‌ಒ ವರದಿ

Update: 2024-03-29 22:56 IST

ಸಾಂದರ್ಭಿಕ ಚಿತ್ರ | Photo: PTI 

 

ಹೊಸದಿಲ್ಲಿ: ಭಾರತದಲ್ಲಿ ಉನ್ನತ ಶಿಕ್ಷಣ ಪಡೆದ ಯುವಜನರು ಯಾವುದೇ ಶಿಕ್ಷಣವನ್ನು ಪಡೆಯದವರಿಗೆ ಹೋಲಿಸಿದರೆ ನಿರುದ್ಯೋಗಿಗಳಾಗುವ ಸಾಧ್ಯತೆ ಹೆಚ್ಚು ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ತನ್ನ ವರದಿಯಲ್ಲಿ ತಿಳಿಸಿದೆ.

ಪದವೀಧರರಲ್ಲಿ ನಿರುದ್ಯೋಗ ದರವು ಶೇ.29.1ರಷ್ಟಿದ್ದು,ಇದು ನಿರಕ್ಷರಿಗಳಲ್ಲಿಯ ಶೇ.3.4ರ ಹೆಚ್ಚುಕಡಿಮೆ ಒಂಭತ್ತು ಪಟ್ಟು ಹೆಚ್ಚಾಗಿದೆ. ಮಾಧ್ಯಮಿಕ ಮತ್ತು ಹೆಚ್ಚಿನ ಶಿಕ್ಷಣ ಪಡೆದವರಲ್ಲಿ ಈ ದರವು (ಶೇ.18.4) ಆರು ಪಟ್ಟು ಹೆಚ್ಚಾಗಿದೆ ಎಂದು ಭಾರತೀಯ ಕಾರ್ಮಿಕ ಮಾರುಕಟ್ಟೆ ಕುರಿತು ನೂತನ ಐಎಲ್‌ಒ ವರದಿಯು ಹೇಳಿದೆ.

ಭಾರತದಲ್ಲಿ ನಿರುದ್ಯೋಗವು ಯುವಜನರ, ವಿಶೇಷವಾಗಿ ಮಾಧ್ಯಮಿಕ ಅಥವಾ ಹೆಚ್ಚಿನ ಶಿಕ್ಷಣವನ್ನು ಪಡೆದಿರುವ ಯುವಜನರ ಪ್ರಮುಖ ಸಮಸ್ಯೆಯಾಗಿದೆ ಮತ್ತು ಕಾಲಾನಂತರದಲ್ಲಿ ಅದು ತೀವ್ರಗೊಂಡಿದೆ ಎಂದು ವರದಿಯು ತಿಳಿಸಿದೆ. ಈ ಅಂಕಿಸಂಖ್ಯೆಗಳು ಕಾರ್ಮಿಕ ಪಡೆಯ ಕೌಶಲ್ಯಗಳು ಮತ್ತು ಮಾರುಕಟ್ಟೆಯಲ್ಲಿ ಉದ್ಯೋಗ ಸೃಷ್ಟಿ ತಾಳೆಯಾಗುತ್ತಿಲ್ಲ ಎನ್ನುವುದನ್ನು ಸೂಚಿಸಿವೆ. ಭಾರತದ ಕಳಪೆ ಶಾಲಾ ಶಿಕ್ಷಣವು ಕ್ರಮೇಣ ಅದರ ಆರ್ಥಿಕ ಪ್ರಗತಿಗೆ ಅಡ್ಡಿಯಾಗಲಿದೆ ಎಂಬ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರಂತಹ ಖ್ಯಾತ ಅರ್ಥಶಾಸ್ತ್ರಜ್ಞರ ಎಚ್ಚರಿಕೆಗಳನ್ನೂ ಇದು ಒತ್ತಿ ಹೇಳಿದೆ.

ಭಾರತದಲ್ಲಿ ಯುವ ನಿರುದ್ಯೋಗ ದರವು ಈಗ ಜಾಗತಿಕ ಮಟ್ಟಗಳಿಗಿಂತ ಹೆಚ್ಚಿದೆ. ಕಾರ್ಮಿಕ ಪಡೆಗೆ ಸೇರುವ ವಿದ್ಯಾವಂತ ಯುವಜನರಿಗೆ ಕೃಷಿಯೇತರ ಕ್ಷೇತ್ರಗಳಲ್ಲಿ ಸಾಕಷ್ಟು ಲಾಭದಾಯಕ ಉದ್ಯೋಗಗಳನ್ನು ಸೃಷ್ಟಿಸಲು ಭಾರತೀಯ ಆರ್ಥಿಕತೆಗೆ ಸಾಧ್ಯವಾಗಿಲ್ಲ. ಇದು ಹೆಚ್ಚುತ್ತಿರುವ ನಿರುದ್ಯೋಗ ದರದಲ್ಲಿ ಪ್ರತಿಫಲಿಸಿದೆ ಎಂದು ಐಎಲ್‌ಒ ಹೇಳಿದೆ.

15ರಿಂದ 29 ವರ್ಷ ವಯೋಮಾನದ ಯುವ ನಿರುದ್ಯೋಗಿ ಭಾರತೀಯರ ಪಾಲು 2000ರಲ್ಲಿದ್ದ ಶೇ.88.6ರಿಂದ 2022ರಲ್ಲಿ ಶೇ.82.9ಕ್ಕೆ ಇಳಿಕೆಯಾಗಿದ್ದರೆ ವಿದ್ಯಾವಂತ ನಿರುದ್ಯೋಗಿಗಳ ಪಾಲು ಇದೇ ಅವಧಿಯಲ್ಲಿ ಶೇ.54.2ರಿಂದ ಶೇ.65.7ಕ್ಕೆ ಏರಿಕೆಯಾಗಿದೆ. ಮಹಿಳೆಯರು ತೀವ್ರ ಹೊಡೆತವನ್ನು ಅನುಭವಿಸಿರುವ ವರ್ಗವಾಗಿದ್ದಾರೆ. ಪುರುಷರಿಗೆ (ಶೇ.62.2) ಹೋಲಿಸಿದರೆ ವಿದ್ಯಾವಂತ ಮಹಿಳಾ ನಿರುದ್ಯೋಗಿಗಳಲ್ಲಿ ನಿರುದ್ಯೋಗ ದರವು ಶೇ.76.7ರಷ್ಟಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಿರುದ್ಯೋಗವು ನಗರ ಪ್ರದೇಶಗಳಲ್ಲಿಯೇ ಹೆಚ್ಚು ಎಂದು ಎಂದು ವರದಿಯು ತಿಳಿಸಿದೆ.

ಕಾರ್ಮಿಕ ಪಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ.25ರಷ್ಟಿದ್ದು, ಈ ವಿಷಯದಲ್ಲಿ ಭಾರತವು ವಿಶ್ವದಲ್ಲಿ ಅತ್ಯಂತ ಕಡಿಮೆ ದರಗಳನ್ನು ಹೊಂದಿರುವ ದೇಶಗಳಲ್ಲಿ ಸೇರಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಜೀವನಾಧಾರ ಉದ್ಯೋಗಗಳಲ್ಲಿ ಗಮನಾರ್ಹ ಏರಿಕೆಯ ಬಳಿಕ ಈ ದರದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News