×
Ad

ವಿಮಾನದಲ್ಲಿ ಕೊಳಕು ಆಸನ : ಇಂಡಿಗೋ ಏರ್‌ಲೈನ್ಸ್‌ಗೆ 1.5 ಲಕ್ಷ ರೂ. ದಂಡ

Update: 2025-08-10 19:41 IST

Photo : PTI

ಹೊಸದಿಲ್ಲಿ,ಆ.10: ಮಹಿಳಾ ಪ್ರಯಾಣಿಕರೊಬ್ಬರಿಗೆ ಸ್ವಚ್ಛವಲ್ಲದ ಹಾಗೂ ಕಲೆಗಳಿರುವ ಆಸನವನ್ನು ಒದಗಿಸುವ ಮೂಲಕ ಇಂಡಿಗೋ ಏರ್‌ಲೈನ್ಸ್‌ ವಿಮಾನಯಾನ ಸಂಸ್ಥೆಯು ಸೇವಾಲೋಪವನ್ನು ಎಸಗಿದೆಯೆಂದು ದಿಲ್ಲಿ ಗ್ರಾಹಕ ವೇದಿಕೆಯು ತೀರ್ಪು ನೀಡಿದೆ. ಅನಾನುಕೂಲತೆ ಹಾಗೂ ಅನುಭವಿಸಿದ ಮಾನಸಿಕ ಯಾತನೆಗಾಗಿ ಪ್ರಯಾಣಿಕ ಮಹಿಳೆಗೆ 1.5 ಲಕ್ಷ ರೂ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

ಇಂಡಿಗೋ ಏರ್‌ಲೈನ್ಸ್‌ ವಿರುದ್ಧ ಪ್ರಯಾಣಿಕಳಾದ ಪಿಂಕಿ ಎಂಬವರು ನೀಡಿದ ದೂರಿಗೆ ಸಂಬಂಧಿಸಿ ಅಧ್ಯಕ್ಷೆ ಪೂನಂ ಚೌಧುರಿ ಹಾಗೂ ಸದಸ್ಯರಾದ ಬಾರಿಖ್ ಅಹ್ಮದ್ ಹಾಗೂ ಶೇಖರ್ ಚಂದ್ರ ಅವರನ್ನೊಳಗೊಂಡ ಹೊಸದಿಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ವಿಚಾರಣೆೆ ನಡೆಸಿತ್ತು. ಈ ವರ್ಷದ ಜನವರಿ 2ರಂದು ತಾನು ಅಝರ್ಬೈಝಾನ್‌ನ ಬಾಕುವಿನಿಂದ ಹೊಸದಿಲ್ಲಿಗೆ ಪ್ರಯಾಣಿಸುತ್ತಿದ್ದಾಗ ತನಗೆ ಸ್ವಚ್ಛವಿರದ, ಕೊಳಕಾದ ಹಾಗೂ ಕಲೆಗಳಿದ್ದ ಆಸನವನ್ನು ನೀಡಲಾಗಿತ್ತೆಂದು ಪಿಂಕಿ ಆಯೋಗಕ್ಕೆ ದೂರು ನೀಡಿದ್ದರು.ಈ ಬಗ್ಗೆ ಇಂಡಿಗೋ ಏರ್‌ಲೈನ್ಸ್‌ಗೆ ದೂರು ನೀಡಿದಾಗ ಅದು ನಿರ್ಲಕ್ಷಿಸಿತ್ತು ಹಾಗೂ ಅಸಂವೇದನಕಾರಿಯಾದ ರೀತಿಯಲ್ಲಿ ವರ್ತಿಸಿತ್ತೆಂದು ಪಿಂಕಿ ಆಪಾದಿಸಿದ್ದರು.

ಪಿಂಕಿ ಅವರ ಆರೋಪವನ್ನು ಇಂಡಿಗೋ ಏರ್‌ಲೈನ್ಸ್‌ ತಳ್ಳಿಹಾಕಿತ್ತು. ದೂರುದಾರಳು ಎದುರಿಸಿದ ಸಮಸ್ಯೆಗಳನ್ನು ತಕ್ಷಣವೇ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು ಹಾಗೂ ಅವರಿಗೆ ಅದೇ ವಿಮಾನದಲ್ಲಿ ಬೇರೊಂದು ಆಸನವನ್ನು ಒದಗಿಸಲಾಗಿತ್ತು. ಅದರಲ್ಲಿ ಆಕೆ ಸ್ವಇಚ್ಥೆಯಿಂದಲೇ ಪ್ರಯಾಣಿಸಿ ದಿಲ್ಲಿ ತಲುಪಿದ್ದರು ಎಂದು ಹೇಳಿದೆ.

ಆದರೆ ವಾಯುಯಾನ ಸಂಸ್ಥೆಯ ವಾದವನ್ನು ತಳ್ಳಿಹಾಕಿದ ಅಯೋಗವು, ಪ್ರತಿವಾದಿಯು(ಇಂಡಿಗೋ ಏರ್‌ಲೈನ್ಸ್‌) ಸೇವಾಲೋಪವನ್ನು ಎಸಗುವ ಮೂಲಕ ದೋಷಿಯೆಂದು ಪರಿಗಣಿಸಿ ತೀರ್ಪು ನೀಡಿದೆ. ಪ್ರಯಾಣಿಕಳು ಅನುಭವಿಸಿದ ಅನಾನುಕೂಲತೆ, ವೇದನೆ ಹಾಗೂ ಮಾನಸಿಕ ಯಾತನೆ ಮತ್ತು ಕಿರುಕುಳಕ್ಕಾಗಿ ಆಕೆಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ ಆಯೋಗ ಆದೇಶದಲ್ಲಿ ತಿಳಿಸಿದೆ. ಮೊಕದ್ದಮೆಗೆ ತಗಲಿದ ವೆಚ್ಚಗಳಿಗಾಗಿ 25 ಸಾವಿರ ರೂ.ಪಾವತಿಸುವಂತೆಯೂ ಅದು ಇಂಡಿಗೋ ಸಂಸ್ಥೆಗೆ ಸೂಚಿಸಿದೆ. ಪ್ರಮಾಣಿತ ವೈಮಾನಿಕ ಶಿಷ್ಟಾಚಾರದ ಪ್ರಕಾರ ಆಂತರಿಕ ಕಾರ್ಯನಿರ್ವಹಣಾ ದಾಖಲೆಗಳ ಭಾಗವಾಗಿ ಪರಿಸ್ಥಿತಿ ದತ್ತಾಂಶ ಪ್ರದರ್ಶನ (ಎಸ್ಡಿಡಿ) ವರದಿಯನ್ನು ಹಾಜರುಪಡಿಸಲು ಏರ್‌ಲೈನ್ಸ್‌ ಸಂಸ್ಥೆಯು ವಿಫಲವಾಗಿದೆ ಎಂದು ಆಯೋಗ ತೀರ್ಪಿನಲ್ಲಿ ಹೇಳಿದೆ.

ವಿಮಾನ ಹಾರಾಟ ಕಾರ್ಯಾಚರಣೆ ಮೇಲಿನ ಕಣ್ಗಾವಲು ಹಾಗೂ ಪ್ರಯಾಣಿಕರಿಗೆ ಸಂಬಂಧಿಸಿದ ಘಟನೆಗಳನ್ನು ದಾಖಲಿಸುವ ನಿರ್ಣಾಯಕವಾದ ಎಸ್ಡಿಡಿ ದಾಖಲೆಗಳನ್ನು ಹಾಜರುಪಡಿಸದೆ ಇರುವುದು ಕಕ್ಷಿದಾರಳ ಎದುರು ಪ್ರತಿವಾದಿಯ (ಇಂಡಿಗೋ ಏರ್‌ಲೈನ್ಸ್‌) ವಾದವನ್ನು ದುರ್ಬಲಗೊಳಿಸಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News