ದೇಶದ ಅತ್ಯಂತ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಐವರು ಮೃತ್ಯು: ಪತ್ರಕರ್ತ ಮುಹಮ್ಮದ್ ಝುಬೈರ್ ಕಳವಳ
ಸಾಂದರ್ಭಿಕ ಚಿತ್ರ
ಇಂದೋರ್: ಕೇಂದ್ರ ಸರಕಾರದಿಂದ ಸತತ ಎಂಟು ಬಾರಿ ದೇಶದ ಅತ್ಯಂತ ಸ್ವಚ್ಛ ನಗರ ಎಂದು ಗುರುತಿಸಿಕೊಂಡಿದ್ದ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಐವರು ಮೃತಪಟ್ಟಿದ್ದು, 1000ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಕಳವಳಕ್ಕೆ ಕಾರಣವಾಗಿದೆ.
ಇಂದೋರ್‌ನ ಭಗೀರಥ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ, ಡಿಸೆಂಬರ್ 24 ರಿಂದ ಭಾಗೀರಥಪುರ ಪ್ರದೇಶದ ಹಲವಾರು ನಿವಾಸಿಗಳು ವಾಂತಿ ಮತ್ತು ಅತಿಸಾರದಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಇಂದೋರ್‌ನ ಮುಖ್ಯ ಆರೋಗ್ಯ ಅಧಿಕಾರಿ ಮಾಧವ್ ಪ್ರಸಾದ್ ಹಸಾನಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಸ್ತುತ 111 ರೋಗಿಗಳು ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 1,000ಕ್ಕೂ ಹೆಚ್ಚು ಜನರು ಸಣ್ಣಪುಟ್ಟ ಅಸ್ವಸ್ಥತೆಗೆ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತ ಸುದ್ದಿ ವರದಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪತ್ರಕರ್ತ ಮುಹಮ್ಮದ್ ಝುಬೈರ್, ಕಲುಷಿತ ನೀರು ಸೇವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆದರೆ ಇಂದೋರ್ ಸತತ ಎಂಟು ವರ್ಷಗಳಿಂದ ಭಾರತದ ಅತ್ಯಂತ ಸ್ವಚ್ಛ ನಗರವಾಗಿ ಸ್ಥಾನ ಪಡೆದಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.