×
Ad

Uttarakhand| ವಿಷ್ಣುಗಢ–ಪಿಪಲ್ಕೋಟಿ ಯೋಜನೆಯ ಸುರಂಗದಲ್ಲಿ ಲೋಕೋ ರೈಲುಗಳ ಢಿಕ್ಕಿ; ಕನಿಷ್ಠ 60 ಮಂದಿಗೆ ಗಾಯ

Update: 2025-12-31 10:03 IST

PC: Screengrab from accident visuals/X/ deccanherald

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಷ್ಣುಗಢ–ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಪಿಪಲ್ಕೋಟಿ ಸುರಂಗದೊಳಗೆ ಮಂಗಳವಾರ ಸಂಜೆ ಲೋಕೋ ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಮಾರು 60 ಕಾರ್ಮಿಕರು ಹಾಗೂ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಲೋಕೋ ರೈಲು, ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಮತ್ತೊಂದು ಗೂಡ್ಸ್ ಲೋಕೋ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಸಮಯದಲ್ಲಿ ರೈಲಿನಲ್ಲಿ ಒಟ್ಟು 109 ಮಂದಿ ಇದ್ದರು ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರವ್ ಕುಮಾರ್ ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗಾಯಗೊಂಡವರಲ್ಲಿ 10 ಮಂದಿಯನ್ನು ಚಿಕಿತ್ಸೆಗಾಗಿ ಗೋಪೇಶ್ವರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

THDC (India) ಸಂಸ್ಥೆಯು ನಿರ್ಮಿಸುತ್ತಿರುವ ಈ ಯೋಜನೆಯ ಸುರಂಗಗಳಲ್ಲಿ ಕಾರ್ಮಿಕರು, ಅಧಿಕಾರಿಗಳು ಹಾಗೂ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಸಾಗಿಸಲು ಲೋಕೋ ರೈಲುಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಚಮೋಲಿ ಜಿಲ್ಲೆಯ ಹೆಲಾಂಗ್ ಮತ್ತು ಪಿಪಲ್ಕೋಟಿ ನಡುವಿನ ಅಲಕನಂದಾ ನದಿಗೆ ಅಡ್ಡಲಾಗಿ 444 ಮೆಗಾವ್ಯಾಟ್ ಸಾಮರ್ಥ್ಯದ ಈ ಜಲವಿದ್ಯುತ್ ಯೋಜನೆ ನಿರ್ಮಾಣವಾಗುತ್ತಿದ್ದು, ನಾಲ್ಕು ಟರ್ಬೈನ್‌ಗಳ ಮೂಲಕ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಯೋಜನೆಯನ್ನು ಮುಂದಿನ ವರ್ಷ ಪೂರ್ಣಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News