×
Ad

ಇಂದು(ಡಿ. 31)ಗಿಗ್‌–ವಿತರಣಾ ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ: ಹೊಸ ವರ್ಷದ ಮುನ್ನಾದಿನ ಸೇವೆಗಳಿಗೆ ಅಡಚಣೆ ಸಾಧ್ಯತೆ

Update: 2025-12-31 10:26 IST
Photo| indiatoday

ಹೊಸದಿಲ್ಲಿ: ಗಿಗ್‌ ಮತ್ತು ವಿತರಣಾ ಕಾರ್ಮಿಕರು ಡಿ.31ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಹೊಸ ವರ್ಷದ ಮುನ್ನಾದಿನ ದೇಶದ ಹಲವು ನಗರಗಳಲ್ಲಿ ಆಹಾರ ವಿತರಣೆ, ತ್ವರಿತ ವಾಣಿಜ್ಯ ಹಾಗೂ ಇ–ಕಾಮರ್ಸ್ ಸೇವೆಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ಹೊಸ ವರ್ಷದ ಮುನ್ನಾದಿನ ಆನ್‌ಲೈನ್ ಆರ್ಡರ್‌ಗಳಿಗೆ ವರ್ಷದ ಅತ್ಯಂತ ಬೇಡಿಕೆಯ ದಿನವಾಗಿರುವುದರಿಂದ, ಮುಷ್ಕರದ ಪರಿಣಾಮ ಆಹಾರ, ದಿನಸಿ ಮತ್ತು ಕೊನೆಯ ಕ್ಷಣದ ಖರೀದಿಗಳ ಮೇಲೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ. Zomato, Swiggy, Blinkit, Zepto, Amazon ಮತ್ತು Flipkart ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ವಿತರಣಾ ಪಾಲುದಾರರು ಮುಷ್ಕರದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ತೆಲಂಗಾಣ ಗಿಗ್‌ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಹಾಗೂ Indian Federation of App-based Transport Workers (IFAT) ಮುಷ್ಕರಕ್ಕೆ ಕರೆ ನೀಡಿದ್ದು, ಮಹಾರಾಷ್ಟ್ರ, ಕರ್ನಾಟಕ, ದಿಲ್ಲಿ–ಎನ್‌ಸಿಆರ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕೆಲವು ಭಾಗಗಳ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

ಅಪ್ಲಿಕೇಶನ್ ಆಧಾರಿತ ವಾಣಿಜ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ವಿತರಣಾ ಕಾರ್ಮಿಕರ ಆದಾಯ ಕುಸಿಯುತ್ತಿದ್ದರೂ, ಹೆಚ್ಚು ಸಮಯ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಒಕ್ಕೂಟಗಳು ಆರೋಪಿಸಿವೆ. ಅಸುರಕ್ಷಿತ ವಿತರಣಾ ಗುರಿಗಳು, ಉದ್ಯೋಗ ಭದ್ರತೆಯ ಕೊರತೆ, ಕೆಲಸದ ಘನತೆಯ ಅಭಾವ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಲ್ಲದಿರುವುದು ಪ್ರಮುಖ ಸಮಸ್ಯೆಗಳೆಂದು ತಿಳಿಸಿವೆ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಕಳುಹಿಸಿದ ಪತ್ರದಲ್ಲಿ, IFAT ದೇಶಾದ್ಯಂತ ಸುಮಾರು ನಾಲ್ಕು ಲಕ್ಷ ಅಪ್ಲಿಕೇಶನ್ ಆಧಾರಿತ ಸಾರಿಗೆ ಮತ್ತು ವಿತರಣಾ ಕಾರ್ಮಿಕರನ್ನು ತಾವು ಪ್ರತಿನಿಧಿಸುತ್ತಿರುವುದಾಗಿ ಹೇಳಿದೆ.

ಡಿ.25ರಂದು ನಡೆದ ರಾಷ್ಟ್ರವ್ಯಾಪಿ ದಿಢೀರ್ ಮುಷ್ಕರದಿಂದ ಹಲವಾರು ನಗರಗಳಲ್ಲಿ 50–60 ಶೇಕಡಾ ಸೇವಾ ವ್ಯತ್ಯಯ ಉಂಟಾಗಿತ್ತು. ಆದರೆ, ಅದರ ನಂತರವೂ ಪ್ಲಾಟ್‌ಫಾರ್ಮ್ ಕಂಪೆನಿಗಳು ಕಾರ್ಮಿಕರೊಂದಿಗೆ ಸಂವಾದಕ್ಕೆ ಮುಂದಾಗಿಲ್ಲ ಎಂದು ಒಕ್ಕೂಟ ಆರೋಪಿಸಿದೆ. ಖಾತೆ ನಿಷ್ಕ್ರಿಯಗೊಳಿಸುವಿಕೆ ಹಾಗೂ ದಂಡಗಳ ಮೂಲಕ ಕಾರ್ಮಿಕರ ಮೇಲೆ ಒತ್ತಡ ಹೇರುತ್ತಿರುವುದಾಗಿ ತಿಳಿಸಿದೆ.

ಡಿ.31ರಂದು ವಿತರಣಾ ಕಾರ್ಯನಿರ್ವಾಹಕರು ಅಪ್ಲಿಕೇಶನ್‌ಗಳಿಂದ ಲಾಗ್‌ಔಟ್ ಆಗುವುದು ಅಥವಾ ಕೆಲಸದ ಹೊರೆ ಕಡಿಮೆ ಮಾಡುವ ಸಾಧ್ಯತೆ ಇರುವುದರಿಂದ, ಗ್ರಾಹಕರು ಆರ್ಡರ್ ವಿಳಂಬ ಮತ್ತು ರದ್ದತಿಯನ್ನು ಎದುರಿಸಬೇಕಾಗಬಹುದು. ಪುಣೆ, ಬೆಂಗಳೂರು, ದಿಲ್ಲಿ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಇದರ ಪರಿಣಾಮ ಹೆಚ್ಚು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಪ್ಲಾಟ್‌ಫಾರ್ಮ್ ಕಂಪೆನಿಗಳನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ತರಬೇಕು, ಅತಿವೇಗದ ಮತ್ತು ಅಸುರಕ್ಷಿತ ವಿತರಣಾ ಮಾದರಿಗಳನ್ನು ನಿಷೇಧಿಸಬೇಕು, ಐಡಿ ನಿರ್ಬಂಧಿಸುವಿಕೆಗೆ ಕಡಿವಾಣ ಹಾಕಬೇಕು ಹಾಗೂ ಆರೋಗ್ಯ ರಕ್ಷಣೆ, ಅಪಘಾತ ವಿಮೆ ಮತ್ತು ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ. ಸರಕಾರ, ಪ್ಲಾಟ್‌ಫಾರ್ಮ್ ಕಂಪೆನಿಗಳು ಮತ್ತು ಕಾರ್ಮಿಕ ಸಂಘಟನೆಗಳನ್ನು ಒಳಗೊಂಡ ತ್ರಿಪಕ್ಷೀಯ ಮಾತುಕತೆಗಳನ್ನು ತಕ್ಷಣ ಆರಂಭಿಸಬೇಕು ಎಂದು ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News