×
Ad

Uttar Pradesh | ಬುರ್ಖಾ, ಹಿಜಾಬ್ ಧರಿಸಿ ʼಧುರಂಧರ್ʼ ಚಿತ್ರದ ಗೀತೆಗೆ ನೃತ್ಯ ಮಾಡಿದ ಪುರುಷರ ಗುಂಪು; ವೀಡಿಯೊ ವೈರಲ್

Update: 2025-12-31 14:34 IST

Photo Credit : x

ಅಮ್ರೋಹ: ಪುರುಷರ ಗುಂಪೊಂದು ಬುರ್ಖಾ, ಹಿಜಾಬ್ ಧರಿಸಿ ‘ಧುರಂಧರ್’ ಚಿತ್ರದ ಗೀತೆಗೆ ನೃತ್ಯ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ವೀಡಿಯೊ ತುಣುಕನ್ನು ‘ಟೀಮ್ ರೈಸಿಂಗ್ ಫಾಲ್ಕನ್’ ಎಂಬ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೆಸ್ಕೊ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಭಾಗವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಈ ವೀಡಿಯೊ ಚಿತ್ರೀಕರಣದ ನಿಖರ ದಿನಾಂಕವಿನ್ನೂ ತಿಳಿದು ಬಂದಿಲ್ಲ.

ಪುರುಷರ ಗುಂಪೊಂದು ಬುರ್ಖಾ ಧರಿಸಿ ನೃತ್ಯ ಮಾಡುತ್ತಿರುವುದನ್ನು ಪ್ರೇಕ್ಷಕರು ಸುಮ್ಮನೆ ನೋಡುತ್ತಿರುವುದು ಈ ವೀಡಿಯೊದಲ್ಲಿ ಸೆರೆಯಾಗಿದೆ. ಕೆಲವರು ವೇದಿಕೆಯ ಮೇಲೂ ಹತ್ತಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

“ಈ ವೀಡಿಯೊ ತುಣುಕಿನಲ್ಲಿ ಯುವಕರ ಗುಂಪೊಂದು ಬುರ್ಖಾಗಳನ್ನು ಧರಿಸಿ, ಸ್ಪಷ್ಟವಾಗಿ ಹಿಜಾಬ್ ಮತ್ತು ಮುಸ್ಲಿಮರ ಧಾರ್ಮಿಕ ಅಸ್ಮಿತೆಯನ್ನು ಗೇಲಿ ಮಾಡುತ್ತಾ, ವಿವಾದಾತ್ಮಕ ಚಲನಚಿತ್ರ ‘ಧುರಂಧರ್’ಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ನೃತ್ಯವು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತಿತ್ತು” ಎಂದು ಈ ವೀಡಿಯೊ ತುಣುಕಿಗೆ ಶೀರ್ಷಿಕೆ ನೀಡಲಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಈ ಘಟನೆಯಲ್ಲಿ ಭಾಗಿಯಾಗಿದ್ದ ಜನರನ್ನು ತಕ್ಷಣವೇ ಗುರುತಿಸಿ, ಬಂಧಿಸಬೇಕು ಎಂದು ಈ ಪೋಸ್ಟ್ ನಲ್ಲಿ ಆಗ್ರಹಿಸಲಾಗಿದೆ. “ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಮನರಂಜನೆಯ ಹೆಸರಲ್ಲಿ ಧಾರ್ಮಿಕ ಗೇಲಿ ಹಾಗೂ ದ್ವೇಷವನ್ನು ಸಹಜಗೊಳಿಸಬಾರದು” ಎಂದೂ ಈ ಪೋಸ್ಟ್ ನಲ್ಲಿ ಒತ್ತಾಯಿಸಲಾಗಿದೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ, ತ್ವರಿತ ಕ್ರಮ ಕೈಗೊಳ್ಳಬೇಕೆಂದು ಹಲವರು ಪೊಲೀಸರನ್ನು ಒತ್ತಾಯಿಸಿದ್ದಾರೆ. “ತಕ್ಷಣವೇ ಈ ವಿಷಯವನ್ನು ಗಮನಿಸಿ ಹಾಗೂ ಸಾಧ್ಯವಾದದ್ದನ್ನು ಮಾಡಿ” ಎಂದು ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು ಮನವಿ ಮಾಡಿದ್ದಾರೆ.

ಈ ನಡುವೆ, ಇಲ್ಲಿಯವರೆಗೆ ಈ ವೀಡಿಯೊದಲ್ಲಿ ಕಂಡು ಬರುವ ಯಾರೊಬ್ಬರ ಗುರುತನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಘಟನೆಯ ಕುರಿತು ಪೊಲೀಸರಿಂದ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪ್ರತಿಕ್ರಿಯೆ ಕಂಡು ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News