×
Ad

I-PAC ಮೇಲೆ ED ದಾಳಿ ಖಂಡಿಸಿ ಮಮತಾ ಬೀದಿಗಿಳಿದು ಪ್ರತಿಭಟನೆ

Update: 2026-01-09 22:50 IST

Photo | PTI

ಕೋಲ್ಕತಾ, ಜ.9: ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿ ಹಾಗೂ ಅದರ ನಿರ್ದೇಶಕ ಪ್ರತೀಕ್ ಜೈನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ಶೋಧವನ್ನು ಖಂಡಿಸಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಶುಕ್ರವಾರ ಕೋಲ್ಕತಾದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಗೆ ನೇತೃತ್ವ ವಹಿಸಿದರು.

ನಗರದ ವಿವಿಧ ಭಾಗಗಳಲ್ಲಿ ನಡೆದ ರ‍್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡು, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

I-PAC ಕಚೇರಿ ಹಾಗೂ ಪ್ರತೀಕ್ ಜೈನ್ ನಿವಾಸದ ಮೇಲೆ ನಡೆದ ದಾಳಿಯು ಪಕ್ಷದ ದತ್ತಾಂಶ ಮತ್ತು ಚುನಾವಣಾ ಕಾರ್ಯತಂತ್ರವನ್ನು ಗುರಿಯಾಗಿಟ್ಟುಕೊಂಡ ಕ್ರಮವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ED ಕ್ರಮದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮ್ಮ ಕೆಲವು ನಾಯಕರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದ್ದಾರೆ ಎಂದೂ ಪಕ್ಷವು ದೂರಿದೆ.

ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಕ್ರಮವನ್ನು ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಪಕ್ಷವು ತಿಳಿಸಿದೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ 2020ರ ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ I-PAC ಸಂಬಂಧಿತ ತನಿಖೆ ನಡೆಯುತ್ತಿದೆ ಎಂದು ED ಈ ಮೊದಲು ಹೇಳಿಕೆ ನೀಡಿತ್ತು. I-PAC ತನ್ನ ವೆಬ್‌ಸೈಟ್‌ನಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನು ತನ್ನ ಗ್ರಾಹಕರಾಗಿ ಉಲ್ಲೇಖಿಸಿದೆ.

ಗೋವಾ ಚುನಾವಣೆಗೆ ಸಂಪರ್ಕ?

ಕಲ್ಲಿದ್ದಲು ಕಳ್ಳಸಾಗಣೆ ಜಾಲದ ಕುರಿತು ED ನಡೆಸುತ್ತಿರುವ ತನಿಖೆಯಲ್ಲಿ, 2021–22ರ ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಪರಾಧ ಆದಾಯ ಬಳಕೆಯಾಗಿದೆ ಎಂಬ ಶಂಕೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಕಳ್ಳಸಾಗಣೆಯಿಂದ ಗಳಿಸಲಾದ ಹಣವನ್ನು ಹವಾಲಾ ಮಾರ್ಗಗಳ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಗಳು ತನಿಖೆಯ ಭಾಗವಾಗಿವೆ.

ಗೋವಾ ಚುನಾವಣಾ ಅವಧಿಯಲ್ಲಿ I-PAC ಜೊತೆ ಕಾರ್ಯನಿರ್ವಹಿಸಿದ್ದ ಕೆಲವು ಸಂಸ್ಥೆಗಳ ಪಾತ್ರದ ಕುರಿತಾಗಿಯೂ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News