×
Ad

2025ರಲ್ಲಿ ಮೋದಿ-ಟ್ರಂಪ್ 8 ಬಾರಿ ಮಾತುಕತೆ ನಡೆಸಿದ್ದರು: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಲುಟ್ನಿಕ್ ಹೇಳಿಕೆಗೆ ಎಂಇಎ ಪ್ರತಿಕ್ರಿಯೆ

Update: 2026-01-09 20:21 IST

photo credit: timesofindia

ಹೊಸದಿಲ್ಲಿ,ಜ.9: ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮತ್ತು ಸುಂಕ ವಿಷಯಗಳಲ್ಲಿ ಭಾರತ-ಅಮೆರಿಕ ನಡುವೆ ಸಂಬಂಧ ಹದಗೆಟ್ಟಿರುವ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) 2025ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಎಂಟು ಬಾರಿ ಮಾತನಾಡಿದ್ದರು ಎಂದು ಶುಕ್ರವಾರ ತಿಳಿಸಿದೆ.

ಸಂವಹನ ಕೊರತೆಯಿಂದಾಗಿ ಭಾರತ-ಅಮೆರಿಕ ನಡುವಿನ ಎಫ್‌ಟಿಎ ಮಾತುಕತೆಗಳು ಸ್ಥಗಿತಗೊಂಡಿವೆ. ಮೋದಿಯವರು ಟ್ರಂಪ್‌ಗೆ ಕರೆ ಮಾಡಿ ಮಾತನಾಡದ ಕಾರಣ ವ್ಯಾಪಾರ ಒಪ್ಪಂದವು ಅಂತಿಮಗೊಳ್ಳಲಿಲ್ಲ ಎಂದು ಅಮೆರಿಕದ ವಾಣಿಜ್ಯ ಸಚಿವ ಹೋವಾರ್ಡ್ ಲುಟ್ನಿಕ್ ಅವರು ಪಾಡಕಾಸ್ಟ್ ಸಂದರ್ಶನದಲ್ಲಿ ಹೇಳಿದ ಹಿನ್ನೆಲೆಯಲ್ಲಿ ಎಂಇಎ ಹೇಳಿಕೆ ಹೊರಬಿದ್ದಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಣಧೀರ್‌ ಜೈಸ್ವಾಲ್ ಅವರು,‘ಲುಟ್ನಿಕ್ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಭಾರತ ಮತ್ತು ಅಮೆರಿಕ ಫೆ.13,2025ರಷ್ಟು ಹಿಂದೆಯೇ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳನ್ನು ನಡೆಸಲು ಬದ್ಧವಾಗಿದ್ದವು. ಆಗಿನಿಂದ ಸಮತೋಲಿತ ಮತ್ತು ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಉಭಯ ದೇಶಗಳು ಹಲವಾರು ಸುತ್ತುಗಳ ಮಾತುಕತೆಗಳನ್ನು ನಡೆಸಿವೆ. ಹಲವಾರು ಸಂದರ್ಭಗಳಲ್ಲಿ ನಾವು ಒಪ್ಪಂದಕ್ಕೆ ಹತ್ತಿರವಾಗಿದ್ದೆವು. ವರದಿಯಾಗಿರುವ ಹೇಳಿಕೆಗಳಲ್ಲಿ ಈ ಚರ್ಚೆಗಳ ವಿವರಗಳನ್ನು ಸರಿಯಾಗಿ ನೀಡಲಾಗಿಲ್ಲ. ಎರಡು ಪೂರಕ ಆರ್ಥಿಕತೆಗಳ ನಡುವೆ ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದದಲ್ಲಿ ನಾವು ಈಗಲೂ ಆಸಕ್ತಿಯನ್ನು ಹೊಂದಿದ್ದೇವೆ. ಅದನ್ನು ಅಂತಿಮಗೊಳಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ. ಪ್ರಾಸಂಗಿಕವಾಗಿ,ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ 2025ರಲ್ಲಿ ಎಂಟು ಸಂದರ್ಭಗಳಲ್ಲಿ ದೂರವಾಣಿಯಲ್ಲಿ ಮಾತುಕತೆಗಳನ್ನೂ ನಡೆಸಿದ್ದಾರೆ ಮತ್ತು ನಮ್ಮ ವ್ಯಾಪಕ ಪಾಲುದಾರಿಕೆಯ ವಿವಿಧ ಅಂಶಗಳ ಬಗ್ಗೆ ಚರ್ಚಿಸಿದ್ದಾರೆ’ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News