×
Ad

ಉತ್ತರಪ್ರದೇಶ | ರೇಬೀಸ್ ಸೋಂಕಿತ ಹಸುವಿನ ಹಾಲಿನಲ್ಲಿ ಪ್ರಸಾದ ತಯಾರಿ : ‘ಪಂಚಾಮೃತ’ ಸೇವನೆ ಬಳಿಕ ಭೀತಿಯಲ್ಲಿ ಗ್ರಾಮಸ್ಥರು

160ಕ್ಕೂ ಹೆಚ್ಚು ಮಂದಿಗೆ ಲಸಿಕೆ

Update: 2025-11-18 16:17 IST

ಸಾಂದರ್ಭಿಕ ಚಿತ್ರ (AI - Grok)

ಗೋರಖ್‌ ಪುರ: ಉತ್ತರ ಪ್ರದೇಶದ ಗೋರಖ್‌ ಪುರ ಜಿಲ್ಲೆಯ ಉರುವಾ ಬ್ಲಾಕ್‌ ನ ರಾಮ್ದಿಹ್ ಗ್ರಾಮದಲ್ಲಿ ಧಾರ್ಮಿಕ ಆಚರಣೆಯಲ್ಲಿ ಪಂಚಾಮೃತ ಪ್ರಸಾದ ತಯಾರಿಸಲು ರೇಬೀಸ್ ಪಾಸಿಟಿವ್ ದೃಢಪಟ್ಟ ಹಸುವಿನ ಹಾಲು ಬಳಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಸುಮಾರು 150ಕ್ಕೂ ಹೆಚ್ಚು ಮಂದಿ ‘ಪಂಚಾಮೃತ’ ಸೇವಿಸಿರುವುದು ಆತಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ತುರ್ತು ಕ್ರಮಕ್ಕೆ ಮುಂದಾಗಿದೆ.

“ಇಲ್ಲಿಯವರೆಗೆ 160 ಗ್ರಾಮಸ್ಥರಿಗೆ ಎರಡು ಡೋಸ್‌ಗಳ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ. ಮುಂದಿನ ಡೋಸ್ ಏಳನೇ ದಿನಕ್ಕೆ ನಿಗದಿಯಾಗಿದೆ", ಎಂದು ಉರುವಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥ ವೈದ್ಯ ಡಾ. ಜೆ.ಪಿ. ತಿವಾರಿ ಹೇಳಿದ್ದಾರೆ.

“ಸೋಂಕಿತ ಹಸುವಿನ ಹಾಲಿನ ಮೂಲಕ ರೇಬೀಸ್ ಮನುಷ್ಯರಿಗೆ ಹರಡುತ್ತದೆ ಎಂಬ ಸ್ಪಷ್ಟ ವೈಜ್ಞಾನಿಕ ಸಾಕ್ಷ್ಯವಿಲ್ಲ. ಆದರೆ ಮುನ್ನೆಚ್ಚರಿಕೆಯ ದೃಷ್ಟಿಯಿಂದಲೇ ಲಸಿಕೆ ಹಾಕಲು ಸಲಹೆ ನೀಡಿದ್ದೇವೆ", ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಂಚಾಮೃತ ಪ್ರಸಾದ ತಯಾರಿಸಲು ಬಳಸಲಾದ ಹಾಲು ಕೊಟ್ಟಿದ್ದ ಹಸು ಶನಿವಾರ ರೇಬೀಸ್ ಲಕ್ಷಣದಿಂದ ಮೃತಪಟ್ಟಿತ್ತು. ಆ ಬಳಿಕ ಗ್ರಾಮದಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ಸುಮಾರು ಮೂರು ತಿಂಗಳ ಹಿಂದೆ ಧರ್ಮೇಂದ್ರ ಗೌರ್ ಎಂಬವರಿಗೆ ಸೇರಿದ ಹಸುವಿಗೆ ಬೀದಿ ನಾಯಿ ಕಚ್ಚಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮದ ರಾಜೀವ್ ಗೌರ್ ಮತ್ತು ಸೋನು ವಿಶ್ವಕರ್ಮ ಅವರು ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದರು. ಆ ವೇಳೆ ಪಂಚಾಮೃತ ಪ್ರಸಾದ ತಯಾರಿಸಲು ಇದೇ ಹಸುವಿನ ಹಾಲನ್ನು ಬಳಸಲಾಗಿತ್ತು ಎಂದು ತಿಳಿದು ಬಂದಿದೆ.

ಘಟನೆಯ ನಂತರ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಶಿಬಿರ ಹಮ್ಮಿಕೊಂಡಿದ್ದಾರೆ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ್ ಝಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News