×
Ad

ಪಹಲ್ಗಾಮ್ ದಾಳಿಗೆ ಗುಪ್ತಚರ ವೈಫಲ್ಯ ಕಾರಣ: ಉವೈಸಿ

Update: 2025-04-23 20:57 IST

ಅಸಾದುದ್ದೀನ್ ಉವೈಸಿ | PTI 

ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯು ಗುಪ್ತಚರ ವೈಫಲ್ಯದ ಪರಿಣಾಮವೆಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಬುಧವಾರ ಆಪಾದಿಸಿದ್ದಾರೆ.

ಹೈದರಾಬಾದ್ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ದಾಳಿಯು ಅತ್ಯಂತ ಅಪಾಯಕಾರಿ, ಖಂಡನೀಯ ಹಾಗೂ ಈ ಹಿಂದೆ ಉರಿ ಹಾಗೂ ಪುಲ್ವಾಮಾಗಳಲ್ಲಿ ನಡೆದಿದ್ದ ಇಂತಹದೇ ಘಟನೆಗಳಿಗಿಂತ ಹೆಚ್ಚು ಅಪಾಯಕಾರಿ, ಖಂಡನೀಯ ಮತ್ತು ಯಾತನಾಕಾರಿಯೆಂದು ಅವರು ಹೇಳಿದ್ದಾರೆ. ಈ ಘಟನೆಯ ಉತ್ತರದಾಯಿತ್ವವನ್ನು ಮೋದಿ ಸರಕಾರವು ಸಂಬಂಧಪಟ್ಟವರ ಮೇಲೆ ಹೊರಿಸಬೇಕು ಹಾಗೂ ಸಾಧ್ಯವಾದಷ್ಟು ಬೇಗನೇ ಸಂತ್ರಸ್ತ ಕುಟುಂಬಗಳಿಗೆ ನ್ಯಾಯವನ್ನು ಖಾತರಿಪಡಿಸಬೇಕು ಹಾಗೂ ಈ ಎಲ್ಲಾ ಭಯೋತ್ಪಾದಕರಿಗೆ ಸರಕಾರವು ತಕ್ಕ ಪಾಠವನ್ನು ಕಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

‘‘ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಅಮಾಯಕ ಜನರಿಗೆ ಅವರ ಧರ್ಮ ಯಾವುದೆಂದು ಕೇಳಿದ ಬಳಿಕ ಅವರಿಗೆ ಗುಂಡಿಕ್ಕಿ ಕೊಂದಿದ್ದಾರೆ. ನಾವಿದನ್ನು ಬಲವಾಗಿ ಖಂಡಿಸುತ್ತೇವೆ. ಸರಕಾರವು ಕಠಿಣ ಕ್ರಮವನ್ನು ಕೈಗೊಳ್ಳುವುದೆಂದು ನಿರೀಕ್ಷಿಸುತ್ತೇವೆ. ಇಲ್ಲಿ ಬೇಹುಗಾರಿಕಾ ವೈಫಲ್ಯವಾಗಿದೆಯೆಂಬುದು ಇನ್ನೊಂದು ಮುಖ್ಯ ವಿಷಯವಾಗಿದೆ’’ ಎಂದವರು ಹೇಳಿದ್ದಾರೆ.

ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುವುದು ಹಾಗೂ ಅಮಾಯಕ ಜನರನ್ನು ಹತ್ಯೆಗೈಯುವುದೇ ನೆರೆ ರಾಷ್ಟ್ರದಿಂದ ಆಗಮಿಸಿದ ಭಯೋತ್ಪಾದಕರ ಉದ್ದೇಶವಾಗಿತ್ತು ಎಂದವರು ಹೇಳಿದ್ದಾರೆ.

ಎಐಎಂಐಎಂ ಪಕ್ಷವು ಈ ಘಟನೆಯಲ್ಲಿ ಸಂತ್ರಸ್ತರಾದವರ ಕುಟುಂಬದೊಂದಿಗೆ ನಿಲ್ಲಲಿದೆ ಹಾಗೂ ಗಾಯಾಳುಗಳ ಕ್ಷೇಮಕ್ಕಾಗಿ ಪ್ರಾರ್ಥಿಸಲಿದೆ ಎಂದು ಉವೈಸಿಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News