ಬಂಧಿಸದಂತೆ ಗ್ಯಾಂಗ್‌ಸ್ಟರ್- ರಾಜಕಾರಣಿ ಮುಕ್ತಾರ್ ಅನ್ಸಾರಿ ಪುತ್ರ ಉಮರ್ ಅನ್ಸಾರಿಗೆ ಮಧ್ಯಂತರ ರಕ್ಷಣೆ
ಮುಖ್ತಾರ್ ಅನ್ಸಾರಿ | Photo : PTI
ಹೊಸದಿಲ್ಲಿ: ಸ್ಥಳಾಂತರಗೊಂಡ ವ್ಯಕ್ತಿಯ ಆಸ್ತಿ ಪ್ರಕರಣವೊಂದರಲ್ಲಿ ಬಂಧಿತ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಯ ಪುತ್ರ ಉಮರ್ ಅನ್ಸಾರಿಯನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ಸೋಮವಾರ ಮಧ್ಯಂತರ ರಕ್ಷಣೆಯನ್ನು ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಎಂ.ಎಂ. ಸುಂದರೇಶನ್ ಅವರನ್ನೊಳಗೊಂಡ ನ್ಯಾಯಪೀಠವು ಉತ್ತರಪ್ರದೇಶದ ಸರಕಾರಕ್ಕೆ ಈ ಬಗ್ಗೆ ನೋಟಿಸ್ ಜಾರಿಗೋಳಿಸಿದೆ. ಆದರೆ, ಪ್ರಕರಣದ ತನಿಖೆಗೆ ಸಹಕರಿಸಬೇಕೆಂದು ಉಮರ್ ಅನ್ಸಾರಿಗೆ ಸೂಚನೆ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನ ಪೂರ್ವ ಜಾಮೀನು ಕೋರಿ ಉಮರ್ ಅನ್ಸಾರಿ ಸಲ್ಲಿಸಿದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಉಮರ್ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಬೇಕೆಂದು ಕೋರಿ ಮುಖ್ತಾರ್ ಅನ್ಸಾರಿಯ ಇನ್ನೋರ್ವ ಪುತ್ರ, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್ಬಿಎಸ್ಪಿ)ಯ ಶಾಸಕ ಅಬ್ಬಾಸ್ ಅನ್ಸಾರಿಯ ಸಲ್ಲಿಸಿದ್ದ ಮನವಿಯನ್ನು ಕೂಡಾ ಹೈಕೋರ್ಟ್ ತಿರಸ್ಕರಿಸಿತ್ತು.
ಆರೋಪಿಗಳ ಮನವಿಯನ್ನು ಉತ್ತರಪ್ರದೇಶ ಸರಕಾರದ ವಕೀಲರು ಹೈಕೋರ್ಟ್ ನಲ್ಲಿ ವಿರೋಧಿಸಿದ್ದರು. ಈ ಇಬ್ಬರು ಸಹೋದರರು ತಮ್ಮ ಅಜ್ಜಿಯ ಸಹಿಯನ್ನು ಫೋರ್ಜರಿ ಮಾಡಿದ್ದರೆಂದು ಅವರು ಆಪಾದಿಸಿದ್ದರು.