×
Ad

ಆರೆಸ್ಸೆಸ್, ಜನಸಂಘ ಕರ್ಪೂರಿ ಠಾಕೂರ್‌ರನ್ನು ಕೆಟ್ಟದಾಗಿ ನಿಂದಿಸಿದ್ದು ಸತ್ಯವಲ್ಲವೇ? : ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ

Update: 2025-10-24 22:19 IST

ಕರ್ಪೂರಿ ಠಾಕೂರ್ , ನರೇಂದ್ರ ಮೋದಿ  | Photo Credit : PTI 

ಹೊಸದಿಲ್ಲಿ,ಅ.24: ಶುಕ್ರವಾರ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರ ಜನ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಮುನ್ನ ಅವರನ್ನು ಟೀಕಿಸಿರುವ ಕಾಂಗ್ರೆಸ್, ಎಪ್ರಿಲ್ 1979ರಲ್ಲಿ ಆಗಿನ ಬಿಹಾರ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಒಬಿಸಿಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಿದ್ದಕ್ಕಾಗಿ ಜನಸಂಘವು ಅವರ ಸರಕಾರವನ್ನು ಉರುಳಿಸಿತ್ತು ಎನ್ನುವುದು ಒಪ್ಪಿಕೊಂಡ ಸತ್ಯವಲ್ಲವೇ ಎಂದು ಪ್ರಶ್ನಿಸಿದೆ.

ಪ್ರಧಾನಿ ಮತ್ತು ರಾಜ್ಯದಲ್ಲಿಯ ಅವರ ‘ಡಬಲ್ ಟ್ರಬಲ್’ ಸರಕಾರ ಸಂವಿಧಾನದಡಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಒಬಿಸಿಗಳು ಮತ್ತು ಇಬಿಸಿಗಳಿಗಾಗಿ ಬಿಹಾರದ ಶೇ.65 ಮೀಸಲಾತಿ ಕಾನೂನಿಗೆ ರಕ್ಷಣೆಯನ್ನು ಒದಗಿಸಲು ಏನೂ ಮಾಡಿಲ್ಲ ಎನ್ನುವುದು ಸತ್ಯವಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮೋದಿಯವರು ಶುಕ್ರವಾರ ಬಿಹಾರದ ಸಮಷ್ಟಿಪುರ ಮತ್ತು ಬೇಗುಸರಾಯ್‌ಗಳಲ್ಲಿ ಎರಡು ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ್ದು,ಅದಕ್ಕೂ ಮುನ್ನ ಕರ್ಪೂರಿ ಠಾಕೂರ್ ಅವರ ಜನ್ಮಸ್ಥಳ ಕರ್ಪೂರಿಗ್ರಾಮಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಎನ್‌ಡಿಎ ಸರಕಾರವು ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಎಕ್ಸ್ ಪೋಸ್ಟ್‌ನಲ್ಲಿ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಗೈದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್‌ ರಮೇಶ್‌ ಅವರು,ಠಾಕೂರ್ 1979ರಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನು ತಂದಿದ್ದಾಗ ಆರೆಸ್ಸೆಸ್ ಮತ್ತು ಜನಸಂಘ ನಾಯಕರು ಅವರನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದ್ದು ಸತ್ಯವಲ್ಲವೇ ಎಂದು ಕೇಳಿದ್ದಾರೆ.

ಎ.28,2024ರಂದು ಸ್ವತಃ ಮೋದಿಯವರೇ ಜಾತಿಗಣತಿಗೆ ಒತ್ತಾಯಿಸಿದ್ದವರನ್ನು ‘ನಗರ ನಕ್ಸಲರು’ ಎಂದು ಕರೆದಿದ್ದು ಮತ್ತು ಅವರ ಸರಕಾರವು ಸಂಸತ್ತಿನಲ್ಲಿ(ಜು.20,2021) ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ (ಸೆ.21,2021) ಜಾತಿ ಗಣತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿತ್ತು ಎನ್ನುವುದು ಸತ್ಯವಲ್ಲವೇ ಎಂದು ರಮೇಶ್‌ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News