ಇಸ್ರೇಲ್-ಇರಾನ್ ಸಂಘರ್ಷ: ಯುದ್ಧದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆ ತರಲು 'ಆಪರೇಷನ್ ಸಿಂಧು'ಗೆ ಚಾಲನೆ ನೀಡಿದ ಭಾರತ
Credit: X/@MEAIndia
ಹೊಸದಿಲ್ಲಿ: ಮಧ್ಯಪ್ರಾಚ್ಯ ದೇಶವಾದ ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷ ಬುಧವಾರ ಆರನೆಯ ದಿನಕ್ಕೆ ತಲುಪಿದ್ದು, ಈ ಯುದ್ಧದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಸ್ವದೇಶಕ್ಕೆ ಕರೆ ತರಲು ಆಪರೇಷನ್ ಸಿಂಧುಗೆ ಭಾರತ ಚಾಲನೆ ನೀಡಿದೆ.
ಭಾರತೀಯರ ಗುಂಪನ್ನು ಹೊಂದಿರುವ ಪ್ರಥಮ ತೆರವು ಕಾರ್ಯಾಚರಣೆ ವಿಮಾನವು ಬಹುಶಃ ಗುರುವಾರ ಮುಂಜಾನೆ ಆಗಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಜತಾಂತ್ರಿಕ ಕಚೇರಿ ಮಾಡಿದ ವ್ಯವಸ್ಥೆಯ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಟೆಹ್ರಾನ್ ನಗರದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.
ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿರುವ ತೆರವು ವಿಮಾನ ಬುಧವಾರ ಇರಾನ್ ನಿಂದ ನಿರ್ಗಮಿಸಿದ್ದು, ಈ ವಿಮಾನವು ಅರ್ಮೇನಿಯಾದ ರಾಜಧಾನಿ ಯೆರೆವಾನ್ ಮೂಲಕ ಜೂನ್ 19ರಂದು ಬೆಳಗ್ಗೆ ಸುಮಾರು 2 ಗಂಟೆಯ ವೇಳೆಗೆ ಭಾರತಕ್ಕೆ ಆಗಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.